ಜನತೆಗೆ ಸ್ಪಂದಿಸದೇ ನುಣುಚಿಕೊಂಡ ಸಚಿವರು
ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 19
ಸಣ್ಣ ಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಇಲಾಖೆ ಸಚಿವರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಮಂಗಳವಾರ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ್ದರಾದರೂ, ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತಹ ಒಂದೇ ಒಂದು ಯೋಜನೆ ಘೋಷಣೆ ಮಾಡದೇ ಮರಳಿದ್ದು ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ.
ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿರುವ ಹುಕ್ಕೇರಿ, ಪ್ರಥಮ ಭೇಟಿ ಸಂದರ್ಭದಲ್ಲಿ ಶ್ರೀಸಾಮಾನ್ಯರಿಗೆ ಅನುಕೂಲವಾಗುವ ಯಾವುದಾದರೊಂದು ಘೋಷಣೆ ಮಾಡಿಯೇ ತೆರಳುತ್ತಾರೆ ಎಂಬ ಮತದಾರರ ನಿರೀಕ್ಷೆ ಹುಸಿಯಾಗಿದೆ.
ಸಚಿವರ ಮಂಗಳವಾರದ ಭೇಟಿಯನ್ನು ಜಿಲ್ಲಾ ಕೇಂದ್ರದ ಜನತೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ ಎಂದು ಆಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಡೆಂಘೀ ಪೀಡಿತರು ಹಾವೇರಿ ಜಿಲ್ಲೆಯಲ್ಲಿದ್ದಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ ಕೊರತೆಯೂ ಹೇಳತೀರದಾಗಿದೆ. ಮಹಾಮಾರಿ ಡೆಂಘೀ ಜ್ವರ ಜಿಲ್ಲೆಯಲ್ಲಿ ಉಲ್ಬಣಗೊಳ್ಳಲು ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆಯ ಕೊರತೆಯೇ ಕಾರಣವಾಗಿದೆ.
ಕಾಟಾಚಾರಕ್ಕೆ: ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡು ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಸಚಿವ ಪ್ರಕಾಶ ಹುಕ್ಕೇರಿ, ಕಾಟಾಚಾರಕ್ಕೆ ಎಂಬಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರಲಾರಂಭಿಸಿವೆ. ಸಭೆಯಲ್ಲಿ ಡೆಂಘೀ, ಕುಡಿಯುವ ನೀರು, ಸ್ವಚ್ಛತೆ ಹಾಗೂ ರಸಗೊಬ್ಬರ ವಿತರಣೆ ಹಾಗೂ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತ್ತಾದರೂ, ಜಿಲ್ಲೆಯ ಜನರಿಗೆ ಮಹಾಮಾರಿಯಾಗಿ ಕಾಡುತ್ತಿರುವ ಡೆಂಘೀ ಜ್ವರದ ನಿಯಂತ್ರಣ ಹಾಗೂ ಡೆಂಘೀ ಜ್ವರದಿಂದ ಬಳಲುತ್ತಿರುವ ರೋಗಿಗೆ ಜಿಲ್ಲಾ ಕೇಂದ್ರದಲ್ಲೇ ಉಪಚಾರ ಪಡೆಯುವ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಪ್ರತ್ಯೇಕ ಘಟಕಕ್ಕೂ ನಿರ್ಲಕ್ಷ್ಯ: 7 ತಾಲೂಕುಗಳಲ್ಲಿಯೂ ಡೆಂಘೀ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿಯಂತೆಯೇ ಈಗಾಗಲೇ ಡೆಂಘೀಯಿಂದ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಡೆಂಘೀ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿರುವುದು ತೀರಾ ಅವಶ್ಯಕ. ಸಚಿವ ಹುಕ್ಕೇರಿ ಬೇರ್ಯಾವ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡದಿದ್ದರೂ ಕನಿಷ್ಠ ಡೆಂಘೀ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳ ಉಪಚಾರಕ್ಕೆ ಪಕ್ಕದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಗೆ ಹೋಗುವುದನ್ನು ತಪ್ಪಿಸಲು ಜಿಲ್ಲೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದರೆ ಬಡಬಗ್ಗರ ಪ್ರಶಂಸೆಗೆ ಪಾತ್ರರಾಗುತ್ತಿದ್ದರು.
ನುಣುಚಿಕೊಂಡ ಸಚಿವ: ರೋಗ ಕುರಿತಂತೆ ಯಾವುದೇ ಆದೇಶ ನೀಡದೆ, ಶಂಕಿತ ಡೆಂಘೀ ಜ್ವರದಿಂದ ಆಸ್ಪತ್ರಗೆ ಬರುವ ರೋಗಿಯ ರಕ್ತ ಪರೀಕ್ಷೆ ಮಾಡಿಸುವಂತೆ ವೈದ್ಯರು ರೋಗಿಯ ಕುಟುಂಬಕ್ಕೆ ತಿಳಿಸದೇ ತಾವೇ ಖುದ್ದಾಗಿ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಅಂಬ್ಯುಲೆನ್ಸ್ನಲ್ಲಿ ರೋಗಿಯನ್ನು ಸಾಗಿಸಿ ಸಂಜೆಯೊಳಗೆ ವರದಿ ತರಿಸಿಕೊಂಡು ಆ ವರದಿಯನ್ನು ಜಿಲ್ಲಾಧಿಕಾರಿಗೂ ಒಪ್ಪಿಸಬೇಕು. ಜಿಲ್ಲಾಧಿಕಾರಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಿದ್ದು, ನಂತರ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಹುಕ್ಕೇರಿ ಸೂಚಿಸಿದ್ದು, ಅಳುವವರ ಕಣ್ಣಿರು ಒರೆಸಿದ್ದಂತಾಗಿದೆ.
ವಿಶೇಷ ಪ್ಯಾಕೇಜ್ಗೆ ನಿರ್ಲಕ್ಷ್ಯ: ಡೆಂಘೀ ನಿಯಂತ್ರಣ ಹಾಗೂ ಡೆಂಘೀಯಿಂದ ಮುಂದೆ ಯಾರೂ ಸಾವನ್ನಪ್ಪದಂತೆ ಸಕಾಲಕ್ಕೆ ಸುಲಭ ರೀತಿ ಚಿಕಿತ್ಸೆ ಪಡೆಯುವಂತೆ ವಿಶೇಷ ಪ್ಯಾಕೇಜ್ನ್ನು ಸಚಿವರು ಘೋಷಿಸಬೇಕಿತ್ತಲ್ಲದೆ, ಡೆಂಘೀ ಜ್ವರವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬೇಕಾಗುವ ಕಿಟ್, ಮತ್ತಿತರ ಉಪಕರಣಗಳನ್ನು ಖರೀದಿಸಲು ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಗೆ ವಿಶೇಷ ಅಧಿಕಾರ ನೀಡಿದ್ದರೆ ಸಚಿವರು ಜಿಲ್ಲೆಗೆ ನೀಡಿದ್ದ ಪ್ರಥಮ ಭೇಟಿಗೆ ಸಾರ್ಥಕತೆ ಬರುತ್ತಿತ್ತು.
ತೀರ್ಥ ಸ್ವರೂಪ: ಜಿಲ್ಲೆಯಲ್ಲಿ ತುಂಗಭದ್ರಾ, ಧರ್ಮಾ, ಕುಮದ್ವತಿ ಹಾಗೂ ವರದಾ ನದಿಗಳು ಹರಿಯುತ್ತಿದ್ದರೂ ಈ ಭಾಗದ ಜನತೆಗೆ ಕುಡಿಯುವ ನೀರು ತೀರ್ಥ ಸ್ವರೂಪವಾಗಿ ಪರಿಣಮಿಸಿದೆ. ಈ ಎಲ್ಲ ನದಿಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಹಾವೇರಿ ಜಿಲ್ಲೆ ನೀರಾವರಿಯಾಗಬೇಕೆಂಬ ಕನಸು ಜನತೆಯದ್ದು. ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ ಎಂಬ ಸುಳಿವನ್ನು ಸಚಿವರು, ಪ್ರಗತಿ ಪರಿಶೀಲನಾ ಸಭೆಯಲ್ಲಾಗಲಿ, ಮಾಧ್ಯಮದೆದುರಾಗಲಿ ಪ್ರಕಟಿಸದಿರುವುದು ಜಿಲ್ಲೆಯ ಜನತೆಯಲ್ಲಿ ನಿರಾಶೆ ಮೂಡಿಸಿದೆ.
ಡೆಂಘೀಯಿಂದ ನಿತ್ಯ ನೂರಾರು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದರೂ ಉಸ್ತುವಾರಿ ಸಚಿವ ಹುಕ್ಕೇರಿ ತಕ್ಷಣಕ್ಕೆ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಮಂಗಳವಾರ ಭೇಟಿ ಸಂದರ್ಭ ಡೆಂಘೀ ಜ್ವರಕ್ಕೆ ಜಿಲ್ಲೆಯಲ್ಲೇ ಚಿಕಿತ್ಸೆ ಪಡೆಯುವಂತಾಗಲು ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸದೇ ಮರಳಿದ್ದು ಸಚಿವರ ಕಾರ್ಯವೈಖರಿ ಬಗ್ಗೆ ಶ್ರೀಸಾಮಾನ್ಯರು ಅನುಮಾನಪಡುವಂತಾಗಿದೆ.
ಜಿಲ್ಲೆಯ ಶಾಸಕರಿಗೆ ....
ಹಾವೇರಿಯ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಜಿಲ್ಲೆಯಿಂದ ಆಯ್ಕೆಯಾದ ಶಾಸಕರ ಹೆಗಲಿಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂಬ ಮಾತುಗಳು ಜಿಲ್ಲಾದ್ಯಂತ ಕೇಳಿ ಬರುತ್ತಿವೆ. ಅನ್ಯ ಜಿಲ್ಲೆಯ ಶಾಸಕರು ಎಷ್ಟಾದರೂ ಬೇರೆ ಜಿಲ್ಲೆಯವರೇ ಆಗಿರುತ್ತಾರೆ. ಅಲ್ಲದೇ, ಜಿಲ್ಲೆಯಲ್ಲಿನ ಸಮಸ್ಯೆ ಅವರಿಗೆ ಗೊತ್ತಿರುವುದು ಅಷ್ಟಕಷ್ಟೇ. ಆದ್ದರಿಂದ ಬರುವ ದಿನಗಳಲ್ಲಾದರೂ ಸಿಎಂ ಸಿದ್ದರಾಮಯ್ಯ ಅವರು, ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ಜಿಲ್ಲೆಯಿಂದ ಆಯ್ಕೆಯಾದವರ ಹೆಗಲಿಗೇರಿಸುವ ಮೂಲಕ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸುತ್ತಾರೆಯೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
- ಬಿ.ಕೆ. ಮಹೇಂದ್ರ