ಹಿರಿಯರ ಮಾರ್ಗದರ್ಶನ ಅವಶ್ಯ
ಬ್ಯಾಡಗಿ: ಸಮಾಜ ಸುಧಾರಣೆಗೆ ಹಿರಿಯರ ಮಾರ್ಗದರ್ಶನ ಅವಶ್ಯ. ಆದರೆ, ಇತ್ತೀಚಿನ ಯುವಜನಾಂಗ ಅಂತಹವುಗಳನ್ನು ತಿರಸ್ಕರಿಸಿ ತಪ್ಪುದಾರಿಗಿಳಿಯುತ್ತಿದೆ ಎಂದು ಹಿರಿಯ ವರ್ತಕ ಲಕ್ಷ್ಮೀನಾರಾಯಣ ಮೇಲಗಿರಿ ಹೇಳಿದರು.
ಫಾದರ್ಸ್‌ಡೇ ಅಂಗವಾಗಿ ಪಟ್ಟಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ಕಲವೀರಪ್ಪ ಎಲಿ ಅವರನ್ನು ಸನ್ಮಾನಿಸಿ ಮಾತನಾಡಿದರು. ತನ್ನೆಲ್ಲಾ ಆಸೆ-ಆಕಾಂಕ್ಷೆ ಹಾಗೂ ಶ್ರಮವನ್ನು ಕುಟುಂಬದ ಶ್ರೇಯಸ್ಸಿಗೆ ಹಾಕುವ ಮೂಲಕ ನಾವಿಕನಂತೆ ಕೆಲಸ ಮಾಡು ಕುಟುಂಬದ ಮುಖ್ಯಸ್ಥನಾದ ತಂದೆಗೆ ಗೌರವ ಕೊಡದವರಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದ ಮುಂದಿನ ಯುವ ಪೀಳಿಗೆಗೆ ಕೆಟ್ಟ ಸಂದೇಶಗಳನ್ನು ಸಾರುತ್ತವೆಯೇ ಹೊರತು ಸನ್ಮಾರ್ಗವನ್ನಲ್ಲ ಎಂದರು.
ಯಾರೊಬ್ಬರ ಅಂಕೆಯಲ್ಲಿರಲು ಇಷ್ಟಪಡದ ಯುವ ಸಮೂಹ ತಮ್ಮ ದುಶ್ಚಟಗಳಿಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ವಿನಾಕಾರಣ ಕುಟುಂಬಗಳನ್ನು ಒಡೆಯುತ್ತಿದ್ದಾರೆ. ಇಂತಹ ಪ್ರಕರಣಗಳು ನಗರ ಪ್ರದೇಶಗಳಲ್ಲಿ ಹೆಚ್ಚು. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದರಿಂದ ಸಮಾಜದಲ್ಲಿ ಮಾನವೀಯ ಸಂಬಂಧಗಳು ಕಡಿದು ಹೋಗಿವೆ. ಅಲ್ಲದೇ ದಿಕ್ಕು ದೆಸೆಯಿಲ್ಲದ ಯುವಕರು ಕತ್ತಲೆ ಜಗತ್ತಿನ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು. ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ಪುರಸಭೆ ಮಾಜಿ ಅಧ್ಯಕ್ಷ ಶಂಭಣ್ಣ ಬಿದರಿ, ಸದಸ್ಯ ರವಿ ಸೋಗಿ, ರಾಧಾಕೃಷ್ಣ ರಟ್ಟಿಹಳ್ಳಿ, ಮನೋಹರ ಅರ್ಕಾಚಾರಿ, ಮುತ್ತಣ್ಣ ಸಂಕಣ್ಣನವರ, ಚನ್ನಬಸಪ್ಪ ಎಲಿ, ಅಶೋಕ ಮಾಳೇನಹಳ್ಳಿ, ಬಸವರಾಜ ಎಲಿ, ಸುರೇಶ ಕಳ್ಳಿಹಾಳ, ಮಲೇಶಪ್ಪ ಎಲಿ, ಸಂಜೀವ ಕಲ್ಲಾಪುರ ಇದ್ದರು.