ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂಗವಿಕಲರನ್ನು ಕುಟುಂಬ ಸದಸ್ಯರೆಂದು ಭಾವಿಸಿ: ಚಂದ್ರಕಾಂತ

Lingaraj Badiger
Updated On : 21 Jun 2013, 11:53 am

ಬ್ಯಾಡಗಿ: ಅಂಗವಿಕಲ ಮಕ್ಕಳನ್ನು ಕೀಳರಿಮೆಯಿಂದ ನೋಡದೇ, ಅವರಿಗೆ ಸುಸ್ಥಿರವಾಗಿ ಜೀವನ ನಡೆಸಲು ಅವಕಾಶ ನೀಡಬೇಕು ಎಂದು ಡಾ. ಚಂದ್ರಕಾಂತ ತಿಳಿಸಿದರು.
ಬುಧವಾರ ತಾಲೂಕಿನ ಬಿಸಲಹಳ್ಳಿ ಗ್ರಾಮದ ಡಾ. ಅಂಬೇಡ್ಕರ ಸಭಾಭವನದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನ ಮಕ್ಕಳಿಗೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.
ವಿಕಲಚೇತನರು ಎಲ್ಲರಂತೆ ಅವರು ಕೂಡ ಮನುಷ್ಯರೇ. ಆದರೆ, ಇತ್ತೀಚಿನ ದಿನಗಳಲ್ಲಿ ಅಂತಹ ಮಕ್ಕಳು ಜನಿಸಿದ ಕೂಡಲೇ ಪೂರ್ವಜನ್ಮದಲ್ಲಿ ಮಾಡಿದ ಪಾಪ ಕರ್ಮಗಳ ಫಲವೆಂದು ಪಾಲಕರು ನಿರ್ಣಯಕ್ಕೆ ಬರುತ್ತಿರುವುದು ದುರಂತವೇ ಸರಿ ಎಂದರು.
ಅಂಗವಿಕಲ ಮಕ್ಕಳನ್ನು ಆತನ ಗೆಳೆಯರು, ಬಂಧುಗಳು ಸೇರಿದಂತೆ ಸಮಾಜದಲ್ಲಿನ ಪ್ರತಿಯೊಬ್ಬರು ಕುಟುಂಬದ ಒಬ್ಬ ಸದಸ್ಯನೆಂದು ಭಾವಿಸಬೇಕು ಎಂದ ಅವರು, ಇತರರಂತೆ ಆತನಿಗೆ ಲಭಿಸಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಹಕರಿಸುವಂತೆ ಕರೆ ನೀಡಿದರು.
ವಿಕಲಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಮಾತನಾಡಿ, ವಿಕಲಚೇತನರಿಗೆ ವೈದ್ಯಕೀಯ ಸೇವೆ ಸೇರಿದಂತೆ ಸರ್ಕಾರದ ಇನ್ನಿತರ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಹೀಗಾಗಿ ಆಸ್ಪತ್ರೆಗಳಿಗೆ ದುಬಾರಿ ಹಣ ನೀಡಲು ಸಾಧ್ಯವಾಗದ ಬಹಳಷ್ಟು ವಿಕಲಚೇತನರು ಮನೆಯಲ್ಲಿ ಉಳಿದುಕೊಂಡು ನೋವು ಅನುಭವಿಸುವಂತಾಗಿದೆ ಎಂದರು.
ಆಶ್ರಯ ಬಡಾವಣೆಗಳಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಉಚಿತವಾಗಿ ನಿವೇಶನ ಸೇರಿದಂತೆ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಸಂಘವು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಆದರೆ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬೇಡಿಕೆಯನ್ನು ನೂತನ ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ವಿಕಲಚೇತನರ ಆರೋಗ್ಯ ತಪಾಸಣೆ ನಡೆಯಿತು. ಗ್ರಾಪಂ ಅಧ್ಯಕ್ಷ ಚನ್ನಪ್ಪ ಮುಚ್ಚಟ್ಟಿ, ಪಿಡಿಓ ಬಂಡಿವಡ್ಡರ, ನಾಗಭೂಷಣ ಅಂಗಡಿ, ವಿಕಲಚೇತನರ ನೇತ್ರಾಧಿಕಾರಿ ಬಿ.ಟಿ. ವಿನಯಕುಮಾರ, ಅಂಗವಿಕಲರ ನೋಡಲ್ ಅಧಿಕಾರಿ ಸಿ.ಸಿ. ದ್ಯಾಮನಗೌಡ್ರ, ಎಂಆರ್‌ಡಬ್ಯ್ಲೂ ಸಹಾಯಕ ನಾಗರಾಜ, ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement