ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೂಕ ವೇದನೆಯಲ್ಲಿ ಹಾನಗಲ್ ಬಸ್‌ನಿಲ್ದಾಣ

Lingaraj Badiger
Updated On : 21 Jun 2013, 11:45 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜೂ. 20
ಬೇಕಾದಷ್ಟು ಬಸ್ಸುಗಳಿವೆ, ಚಾಲಕ ನಿರ್ವಾಹಕರ ಕೊರತೆ ಇಲ್ಲ, ಖಾಸಗಿ ವಾಹನಗಳ ಕಾನೂನು ಬಾಹಿರ ಚಾಲನೆಯಿಂದ ವರ್ಷಕ್ಕೆ ರು. 6 ಕೋಟಿ ನಷ್ಟ, ಬಸ್ ನಿಲ್ದಾಣ ಕಾಮಗಾರಿ ಗಪ್‌ಚುಪ್. ಇದು ಹಾನಗಲ್ಲ ಕೆಎಸ್‌ಆರ್‌ಟಿಸಿ ಘಟಕದ ಮೂಕ ವೇದನೆ.
1996ರಲ್ಲಿ ಆರಂಭವಾದ ಬಸ್ ಡಿಪೋ ಈ ಭಾಗದ ಸಾರ್ವಜನಿಕರ ಸಂಚಾರ ವ್ಯವಸ್ಥೆಗೆ ಹಲವು ಹರ ಸಾಹಸಗಳ ಮೂಲಕ ಅನುಕೂಲ ಮಾಡುತ್ತಲೇ ಬಂದಿದೆ. ರಾಜ್ಯದಲ್ಲಿಯೇ ದೊಡ್ಡ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಹಾನಗಲ್ಲ ತಾಲೂಕಿನ 150 ಹಳ್ಳಿಗಳು ಸೇರಿದಂತೆ ರಾಜ್ಯ, ದೇಶದ ವಿವಿಧ ಭಾಗಗಳಿಗೆ ಹಾನಗಲ್ಲಿನಿಂದ ಬಸ್‌ಗಳನ್ನು ಓಡಿಸಿ ಪ್ರಯಾಣಿಕರಿಗೆ ಸಾರ್ಥಕ ಸೇವೆ ನೀಡುವಲ್ಲಿ ಶ್ರಮಿಸುತ್ತಿದೆ.
ಕೆಎಸ್‌ಆರ್‌ಟಿಸಿ ಆದಾಯಕ್ಕೆ ಕತ್ತರಿ:  ಈ ಮಧ್ಯೆ ಬೆಂಬಿಡದೆ ಬೇತಾಳನಂತೆ ಸಮಸ್ಯೆಗಳು ಕಾಡುತ್ತಲೇ ಬಂದಿವೆಯಾದರೂ ಕೂಡ ಈಗ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ಆದರೂ ಬಸ್ ನಿಲ್ದಾಣದ ಬಳಿ ನಿಂತು ಪ್ರಯಾಣಿಕರನ್ನು ಸೆಳೆಯುತ್ತಿರುವ ಖಾಸಗಿ ವಾಹನಗಳೇ ಹಾನಗಲ್ಲ ಬಸ್ ಡಿಪೋ ಆದಾಯಕ್ಕೆ ಕತ್ತರಿ ಹಾಕುತ್ತಿವೆ.
ಖಾಸಗಿ ವಾಹನ ಹಾವಳಿ: ಹಾನಗಲ್ಲಿನಿಂದ ಹಾವೇರಿ, ಹುಬ್ಬಳ್ಳಿ, ಶಿರಸಿ, ಮುಂಡಗೋಡ, ಆನವಟ್ಟಿ, ತಿಳವಳ್ಳಿ, ಬಮ್ಮನಹಳ್ಳಿ ಸೇರಿದಂತೆ ಪ್ರಮುಖ ಊರುಗಳಿಗೆ ಮೆಟೆಡೋರ್, ಮ್ಯಾಕ್ಸಿಕ್ಯಾಬ್, ಟ್ರ್ಯಾಕ್ಸ್‌ಗಳು ಸೇರಿದಂತೆ 150ಕ್ಕೂ ಹೆಚ್ಚು  ವಾಹನಗಳು ಬಸ್ ನಿಲ್ದಾಣದ ಬಳಿಯೇ ನಿಂತು, ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರನ್ನು ಕೂಗಿ ಕರೆದುಕೊಂಡು ಹೋಗುತ್ತಿರುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ಖಾಸಗಿ ವಾಹನಗಳತ್ತ: ಅಂದಾಜು ನೂರಕ್ಕೂ ಅಧಿಕ ಇಂಥ ಖಾಸಗಿ ವಾಹನಗಳು ಕೆಎಸ್‌ಆರ್‌ಟಿಸಿ ಆದಾಯಕ್ಕೆ ಕತ್ತರಿ ಹಾಕುತ್ತಿವೆ. ಹಾನಗಲ್ಲ ಬಸ್ ಡಿಪೋ ಮೂಲಕ 87 ಬಸ್‌ಗಳು 81 ಅನುಸೂಚಿತ ಮಾರ್ಗಗಳಲ್ಲಿ ಓಡಾಡುತ್ತವೆ. 291 ಚಾಲಕ, ನಿರ್ವಾಹಕರು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ಬಸ್‌ಗಳು ಅತ್ಯುತ್ತಮವಾಗಿವೆ. ಇತ್ತೀಚೆಗಂತೂ ಬಸ್‌ಗಳು ಅತ್ಯಂತ ಸುಸಜ್ಜಿತ. ಆದಾಗ್ಯೂ ಪ್ರಯಾಣಿಕರು ಖಾಸಗಿ ವಾಹನಗಳತ್ತ ವಾಲುತ್ತಿರುವುದು ಅಚ್ಚರಿ ಮೂಡಿಸಿದೆ.
ಹಾವಳಿ ತಡೆ ಮಾತುಕತೆ ವಿಫಲ: ಸ್ಥಳೀಯವಾಗಿ ಹಾನಗಲ್ಲ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಿಗೆ ಟಂಟಂ, ಜೀಪುಗಳು, ಚಿಕ್ಕ ಚಿಕ್ಕ ಗೂಡ್ಸ್ ಗಾಡಿಗಳಲ್ಲಿ ಜನರನ್ನು ತುಂಬಿಕೊಂಡು ಸಾಗಿಸುತ್ತಿರುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ ಕೆಎಸ್‌ಆರ್‌ಟಿಸಿ ವಾಹನಗಳಿಗಿಂತ ಸ್ವಲ್ಪ ಕಡಿಮೆ ದರ ನಿಗದಿ ಮಾಡಿ ಖಾಸಗಿ ವಾಹನಗಳು ಪ್ರಯಾಣಿಕರನ್ನು ಸೆಳೆಯುತ್ತಿರುವುದೂ ಕೂಡ ಒಂದು ಕಾರಣವಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಜನಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆಯೂ ವಿಫಲವಾಗಿದೆ.
ಕ್ಯಾರೆ ಎನ್ನದ ಆರ್‌ಟಿಒ: ಖಾಸಗಿ ವಾಹನ ನಿಯಂತ್ರಣ ಕುರಿತು ಹಾನಗಲ್ಲ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರೂ ಫಲ ನೀಡದ ಕಾರಣ ಹಾವೇರಿ ಜಿಲ್ಲಾ ಎಸ್‌ಪಿ, ಡಿವೈಎಸ್‌ಪಿ ಅವರಿಗೆ ನೂರಕ್ಕೂ ಅಧಿಕ ಮನವಿ ಸಲ್ಲಿಸಿದರೂ ಫಲ ನೀಡಿಲ್ಲ. ಅನಧಿಕೃತವಾಗಿ ಓಡಾಡುತ್ತಿರುವ ಖಾಸಗಿ ವಾಹನಗಳ ಮೇಲೆ ಕ್ರಮ ಜರುಗಿಲೂ ಹಾಗೂ ವಸ್ತುಗಳನ್ನು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸಿದರೂ ಕ್ರಮ ಜರುಗಿಸದ ಆರ್‌ಟಿಒ ಕಾರ್ಯಾಲಯ ಹಾಗೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಿಸುತ್ತಲೇ ಇಲ್ಲ.
ನಿಲ್ದಾಣ ಕಾಮಗಾರಿ ಸ್ಥಗಿತ: ಪ್ರತಿದಿನ ಹಾನಗಲ್ಲ ಬಸ್ ನಿಲ್ದಾಣದಿಂದ 7,500 ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗುತ್ತಾರೆ. ತಿಂಗಳ ಪಾಸಿನ 200 ಪ್ರಯಾಣಿಕರಿದ್ದಾರೆ. ರು. 2 ಕೋಟಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿ ವರ್ಷವೇ ಕಳೆದಿದೆ. ಕಾಮಗಾರಿ ಪ್ರಸಕ್ತ ಸ್ಥಗಿತವಾಗಿದ್ದು, ವಾಹನ ನಿಲ್ಲಲೂ ಸ್ಥಳವಿಲ್ಲ. ಬಸ್ ನಿಲ್ದಾಣದ ವ್ಯವಸ್ಥೆ ಅವ್ಯವಸ್ಥೆ ಆಗರವಾಗಿದೆ. ಏನೇ ಆದರೂ ಸಾರ್ವಜನಿಕರ ಸಹಕಾರ ಮಾತ್ರ ಮೆಚ್ಚುವಂಹದ್ದು. ಈ ನಡುವೆ ಹಾನಗಲ್ಲಿನಿಂದ ಜಿಲ್ಲಾಕೇಂದ್ರ ಹಾವೇರಿಗೆ ಬೆಳಗಿನಿಂದ ಬಸ್‌ಗಳ ಕೊರತೆ ಇಲ್ಲ. ಆದರೆ, ಸಂಜೆ 6ರಿಂದ ರಾತ್ರಿ 10ರ ವರೆಗೆ ಬಸ್‌ಗಳಿಗಾಗಿ ಪ್ರಯಾಣಿಕರ ಗೋಳಾಡುತ್ತಿರುವುದನ್ನು ಕೆಎಸ್‌ಆರ್‌ಟಿಸಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಪ್ರಯಾಣಿಕರ ಪರದಾಟಕ್ಕೆ ಪರಿಹಾರ ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಹಾವೇರಿ ಹಾಗೂ ಹಾನಗಲ್ಲ ಡಿಪೋಗಳೆರಡೂ ಕೂಡಿ ಮಾತ್ರ ಈ ಸಮಸ್ಯೆ ಪರಿಹರಿಸಲು ಸಾಧ್ಯ. ಆದರೆ, ಅದು ಯಾವಾಗ ಎಂಬುದೇ ಯಕ್ಷಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement