ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೌಲ್ಯವರ್ಧಿತ ತೆರಿಗೆ: ವಿನಾಯಿತಿ ನೀಡಿ

Lingaraj Badiger
Updated On : 21 Jun 2013, 11:53 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜೂ. 20
ಒಣ ಮೆಣಸಿನಕಾಯಿ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಸಂಪೂರ್ಣ ವಿನಾಯಿತಿ ನೀಡುವಂತೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಎಸ್.ಆರ್. ಪಾಟೀಲರು, ಮೆಣಸಿನಕಾಯಿ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ಸುಮಾರು 10 ಜಿಲ್ಲೆಗಳ ರೈತರು ಮೆಣಸಿನಕಾಯಿ ಬೆಳೆಯತ್ತಿದ್ದಾರೆ. ಅಂದಾಜು 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 150 ಲಕ್ಷ ಮೆಟ್ರಿಕ್ ಟನ್ ಮೆಣಸಿನಕಾಯಿ ಉತ್ಪಾದಿಸಲಾಗುತ್ತಿದೆ. ಸುಮಾರು 20 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಮೆಣಸಿನಕಾಯಿ ವಾರ್ಷಿಕ ಸುಮಾರು ರು. 800 ಕೋಟಿ ವಹಿವಾಟು ನಡೆಯುತ್ತಿದೆ.
ರಾಜ್ಯದಲ್ಲಿ ಬೆಳೆಯುವ ಮೆಣಸಿನಕಾಯಿ ಖಾರದಪುಡಿ, ಮಸಾಲೆ ಪದಾರ್ಥವಾಗಿ ಬಳಕೆಯಾಗುತ್ತಿದೆ. ಒಟ್ಟು ಉತ್ಪಾದನೆಯಾದ ಶೇ. 60ರಷ್ಟು ಮೆಣಸಿನಕಾಯಿ ಓಲಿಯೋರಿಸಿನ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಇಲ್ಲಿ ಉತ್ಪಾದನೆಯಾದ ಮೆಣಸಿನಕಾಯಿಯಲ್ಲಿ ಶೇ. 70ರಷ್ಟು ವಿದೇಶಗಳಿಗೆ ರಫ್ತಾಗುತ್ತಿದೆ. ರಾಜ್ಯ ಸರ್ಕಾರ ಶೇ. 2 ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ಮೆಣಸಿನಕಾಯಿ ಮೇಲೆ ವಿಧಿಸಿದ್ದು, ವಿದೇಶಿ ವಿನಿಮಯದಿಂದ ಸುಮಾರು ರು. 500 ಕೋಟಿ ವಹಿವಾಟಿನ ಮೌಲ್ಯವರ್ಧಿತ ತೆರಿಗೆಯನ್ನು ಸರ್ಕಾರ ಮರು ಪಾವತಿ ಮಾಡುತ್ತಿದೆ.
ಮಹಾರಾಷ್ಟ್ರ ಸೇರಿದಂತೆ ತಮಿಳುನಾಡು ಹಾಗೂ ಗುಜರಾತ್ ರಾಜ್ಯಗಳಲ್ಲಿ ಮೆಣಸಿನಕಾಯಿ ಮೇಲೆ ವ್ಯಾಟ್‌ನಿಂದ ಮುಕ್ತಗೊಳಿಸಿದ್ದು, ಇದರಿಂದ ರಾಜ್ಯದ ರೈತರಿಗೆ ಮೆಣಸಿನಕಾಯಿ ದರದಲ್ಲಿ ಏರುಪೇರು ಆಗುವ ಮೂಲಕ ಅನ್ಯಾಯವಾಗುತ್ತಿದೆ. ಮೆಣಸಿನಕಾಯಿ ಒಟ್ಟು ಉತ್ಪಾದನೆಯ ಶೇ. 15ರಷ್ಟು ಗೃಹ ಬಳಕೆಗೆ ಉಪಯೋಗಿಸಲಾಗುತ್ತಿದ್ದು, ರಾಜ್ಯದ ಆದಾಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೌಲ್ಯವರ್ಧಿತ ತೆರಿಗೆ ಸಂಪೂರ್ಣವಾಗಿ ವಿನಾಯತಿ ನೀಡುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement