ರಾಜ್ಯಕ್ಕೆ ರು. 322 ಕೋಟಿ ಬೆಳೆವಿಮೆ ಪರಿಹಾರ
ಹಾನಗಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಅವರ ವಿಶೇಷ ಕಾಳಜಿಯಿಂದಾಗಿ ರಾಜ್ಯಕ್ಕೆ ಸಕಾಲಿಕವಾಗಿ ಬೆಳೆವಿಮೆ ಬಿಡುಗಡೆಗೊಳ್ಳುತ್ತಿದ್ದು, ಇದರೊಂದಿಗೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬರಗಾಲ ಪರಿಹಾರವಾಗಿ ವಿತರಣೆಗೆ ಕೇಂದ್ರದಿಂದ ರಾಜ್ಯಕ್ಕೆ ರು. 322 ಕೋಟಿ ಬಿಡುಗಡೆಯಾಗಿದೆ ಎಂದು ವಿಧಾನಸಭೆ ಮಾಜಿ ಉಪ ಸಭಾಪತಿಗಳು ಆದ ಶಾಸಕ ಮನೋಹರ ತಹಸೀಲ್ದಾರ್ ತಿಳಿಸಿದರು.
ಗುರುವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಸಿಎಂ, ಕೃಷಿ ಸಚಿವರ ಕಾಳಜಿ: ಹಿಂದಿನ ವರ್ಷದ ಬೆಳೆ ಆಣೆವಾರಿಯಲ್ಲಿ ಅಧಿಕಾರಿಗಳು ಮಾಡಿದ ಲೋಪಕ್ಕಾಗಿ ಬೆಳೆವಿಮೆ ತೀರ ಕಡಿಮೆ ಪಡೆಯುವಂತಾಗಿದೆ. 2012-13ನೇ ಸಾಲಿಗೆ ಹಾನಗಲ್ಲ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಿರುವುದರಿಂದ ಎಲ್ಲ ರೈತರಿಗೂ ಬೆಳೆವಿಮೆ ಬರಬೇಕಾಗಿತ್ತು. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಬೆಳೆವಿಮೆ ಬಿಡುಗಡೆಯಾಗಬೇಕಾಗಿತ್ತು. ಆದರೆ, ಬಿಜೆಪಿ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಅವರ ಆಸಕ್ತಿ ಹಾಗೂ ಕಾಳಜಿಯಿಂದಾಗಿ ಈಗ ಬೆಳೆವಿಮೆ ಬಿಡುಗಡೆಯಾಗುತ್ತಿದೆ ಎಂದರು.
ಸಕಾಲಕ್ಕೆ ಬೀಜ, ಗೊಬ್ಬರ ವಿತರಣೆ: ಬರಗಾಲದ ಕಾರಣದಿಂದಾಗಿ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ರು. 322 ಕೋಟಿ ಬಿಡುಗಡೆಗೊಳಿಸಿರುವುದರಲ್ಲಿ ಹಾನಗಲ್ಲ ತಾಲೂಕಿಗೆ ರು. 70 ಲಕ್ಷ ಬಿಡುಗಡೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹಾವೇರಿ ಜಿಲ್ಲೆಗೆ ರು. 100 ಕೋಟಿ ಬಿಡುಗಡೆಯಾಗಿದೆ. ಅಲ್ಲದೆ ಪ್ರಸ್ತುತ ಕೃಷಿ ವರ್ಷಕ್ಕೆ ಬೇಕಾಗುವ ಬೀಜ ಹಾಗೂ ಗೊಬ್ಬರ ಕೊರತೆಯೂ ಇಲ್ಲ. ಸಕಾಲಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ಬೀಜ-ಗೊಬ್ಬರ ವಿತರಿಸಲಾಗುತ್ತಿದೆ ಎಂದರು.
ಶೀಘ್ರ ಪರಿಹಾರ: ತಾಂತ್ರಿಕ ದೋಷಗಳಿಂದಾಗಿ ಬಿಪಿಎಲ್ ಫಲಾನುಭವಿಗಳಿಗೆ ಎಪಿಎಲ್ ಕಾರ್ಡುಗಳು ವಿತರಣೆಯಾಗಿವೆ. ಇದು ಇಲಾಖೆ ಗಮನಕ್ಕೂ ಬಂದಿದೆ. ಇದನ್ನು ಸರಿಪಡಿಸಲು ಇಲಾಖೆ ಮುಂದಾಗಿದೆ. ಆದರೆ, ಗ್ರಾಪಂ.ಗಳಲ್ಲಿ ತಾಂತ್ರಿಕ ದೋಷದಿಂದಾಗಿ ಇಂಟ್ರನೆಟ್ ಕಾರ್ಯ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಕಾರ್ಡುಗಳನ್ನು ಒದಗಿಸುವುದು ವಿಳಂಬವಾಗುತ್ತಿದ್ದು, ಕೂಡಲೆ ಸರಿಪಡಿಸಲಾಗುವುದು ಎಂದರು.
ಕಾಮಗಾರಿ ಶೀಘ್ರ ಪೂರ್ಣ: ಹಾನಗಲ್ಲ ತಾಲೂಕಿನಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ಅವಧಿಯಲ್ಲಿ ಆರಂಭವಾದ ಮತ್ತು ಆರಂಭವಾಗಬೇಕಾಗಿರುವ ಹಾಗೂ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಅಡಚಣೆ ಇಲ್ಲದೆ ಕೈಗೊಳ್ಳಲಾಗುವುದು. ಹಾನಗಲ್ಲ ನಗರದಲ್ಲಿ ಒಂದು ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಅಕ್ಕಿಆಲೂರಿನಲ್ಲಿ ಒಂದು ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಾಪಿಸಲಾಗುವುದು. ಧರ್ಮಾ ಕಾಲುವೆ ಕಾಮಗಾರಿಗಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಪ್ಪರ ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿ, ಬಸಾಪುರ ಏತನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕೆರೆಗೆ ನೀರು: ಹಾನಗಲ್ಲ ತಾಲೂಕಿನ ಉತ್ತರ ಭಾಗದ ನೀರಾವರಿಗೆ ಎಲ್ಲ ಕರೆಗಳಿಗೆ ಮಳೆಗಾಲದಲ್ಲಿ ನೀರು ತುಂಬಿಸುವ ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಶೀಘ್ರ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಹಾನಗಲ್ಲ ನಗರಕ್ಕೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಬೇಸಿಗೆಯಲ್ಲಾಗುವ ಸಮಸ್ಯೆ ಪರಿಹಾರಕ್ಕೆ ವರದಾ ನದಿಯಿಂದ ನೀರು ತಂದು ಆನೆಕೆರೆ ತುಂಬಿಸಿ ನಗರಕ್ಕೆ ಶುದ್ಧ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ಈ ಕಾರ್ಯ ಸರ್ಕಾರದ ಪರಿಶೀಲನೆಯಲ್ಲಿದೆ. ಅಲ್ಲದೆ ಹಾನಗಲ್ಲ ನಗರದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೆ.ಎಚ್. ಪಾಟೀಲ ಪ್ರತಿಷ್ಠಾನದ ಮೂಲಕ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಿ.ಎಸ್. ಬಡಿಗೇರ, ಮಧು ಪಾಣಿಗಟ್ಟಿ, ನಾಗೇಶ ಪಡೆಪ್ಪನವರ, ನಾಗಪ್ಪ ಸವದತ್ತಿ. ವೀರೇಶ್ ಬೈಲವಾಳ, ಆರ್.ಎಸ್. ಪಾಟೀಲ ಇನ್ನಿತರರಿದ್ದರು.