ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಂಕಿತ ಡೆಂಘೀಗೆ ಬಾಲಕಿ ಬಲಿ

Lingaraj Badiger
Updated On : 21 Jun 2013, 11:53 am

ಬ್ಯಾಡಗಿ: ಶಂಕಿತ ಡೆಂಘೀ ಜ್ವರಕ್ಕೆ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಗುರುವಾರ ನಡೆದಿದೆ.
ದುರ್ದೈವಿ ಬಾಲಕಿಯನ್ನು ತಾಲೂಕಿನ ಮೋಟೆಬೆನ್ನೂರಿನ ಅಂಜುಮಾ ಶರೀಫಸಾಬ್ ಮತ್ತಿಹಳ್ಳಿ(13) ಎನ್ನಲಾಗಿದೆ.
ಬಾಲಕಿ ಅಂಜುಮಾಗೆ ಕಳೆದೊಂದು ವಾರದಿಂದ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ರಾಣಿಬೆನ್ನೂರಿನ ಕೇಲಗಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಡೆಂಘೀ ಜ್ವರದ ಶಂಕೆಯಿಂದ ದಾವಣಗೆರೆಯ ಎಸ್.ಎಸ್. ಹೈಟೆಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸಿದ್ದರು. ಜ್ವರ ನಿಯಂತ್ರಣಕ್ಕೆ ಬಾರದೇ ಅಂಜುಮಾ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಐದನೇ ಬಲಿ
ತಾಲೂಕಿನಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಬಲಿಯಾದವರ ಸಂಖ್ಯೆ ಇದೀಗ 5ಕ್ಕೆ ಏರಿದೆ. ಬ್ಯಾಡಗಿ ಪಟ್ಟಣ ಸೇರಿದಂತೆ ತಾಲೂಕಿನ ಮೋಟೆಬೆನ್ನೂರು, ಛತ್ರ ಚಿಕ್ಕಬಾಸೂರು ಗ್ರಾಮಗಳಲ್ಲಿ ಡೆಂಘೀ ಜ್ವರಕ್ಕೆ 4 ಮಕ್ಕಳು ಬಲಿಯಾಗಿದ್ದು, ಗುರುವಾರ ಮೃತಪಟ್ಟ ಬಾಲಕಿ ಅಂಜುಮಾ 5ನೇಯಳಾಗಿದ್ದಾಳೆ.
ವರದಿ ಬಂದಿಲ್ಲ
ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ಆರಂಭಿಸಲಾಗಿದ್ದು, ಔಷೋಧಾಪಚಾರ ನಡೆಸುವ ಮೂಲಕ ಲಾರ್ವಾ ನಾಶಪಡಿಸುವ ಕಾರ್ಯಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಸೊಳ್ಳೆಗಳನ್ನು ನಾಶಪಡಿಸಲು ಫಾಗಿಂಗ್ ವ್ಯವಸ್ಥೆ ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯಕೈಗೊಳ್ಳುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಲಾಗಿದೆ. ಆದರೆ, ಈ ಕುರಿತು ಆರೋಗ್ಯಾಧಿಕಾರಿ ಮಾತನಾಡಿ, ಬಾಲಕಿಯ ಸಾವಿನ ವರದಿ ನಮ್ಮ ಕೈತಲುಪಿಲ್ಲ. ಹೀಗಾಗಿ ಶಂಕಿತ ಡೆಂಘೀ ಇರಬಹುದೆಂದು ಮಾಹಿತಿ ನೀಡಿದರು.
ಚಿಕಿತ್ಸೆ ನೀಡಿ
ಡೆಂಘೀ ಜ್ವರಕ್ಕೆ ಸಂಬಂಧಿಸಿದ ಮ್ಯಾಕಲೈಜ್ ಟೆಸ್ಟ್ ಹಾಗೂ ಬಿಳಿರಕ್ತ ಕಣಗಳನ್ನು ಹಾಕುವ ಪ್ಲೇಟ್‌ಲೆಟ್ ಸೌಲಭ್ಯವು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿಲ್ಲ. ಚಿಕಿತ್ಸೆಗಾಗಿ ದಾವಣಗೆರೆ, ಹುಬ್ಬಳ್ಳಿ ಹಾಗೂ ಮಣಿಪಾಲ ಇನ್ನಿತರ ಸ್ಥಳಗಳಿಗೆ ಹೋಗಬೇಕಾಗಿದ್ದು, ಬಡ ಕುಟುಂಬಗಳಿಂದ ಇದು ಸಾಧ್ಯವಿಲ್ಲ. ಕೂಡಲೇ ಚಿಕಿತ್ಸೆಗೆ ಅವಶ್ಯವಿರುವ ಔಷಧೋಪಕರಣಗಳನ್ನು ತಾಲೂಕಿಗೆ ಒದಗಿಸುವಂತೆ ಜಿಪಂ ಸದಸ್ಯ ವೀರೂಪಾಕ್ಷಪ್ಪ ಬಳ್ಳಾರಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಾವು ತಡೆಗಟ್ಟಿ
ಡೆಂಘೀಗೆ ಸಂಬಂಧಿತ ರಕ್ಷಪರೀಕ್ಷೆ ನಡೆಸಲು ಇಡೀ ರಾಜ್ಯದಲ್ಲಿ ಕೇವಲ 21 ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವುದಾಗಿ ತಿಳಿದು ಬಂದಿದೆ. ಜಿಲ್ಲೆಯಲ್ಲಿ ಜ್ವರಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆರೋಗ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement