ಸ್ವಚ್ಛತೆ: ಪ್ರತಿ ಗ್ರಾಪಂಗೆ ರು. 50 ಸಾವಿರ
ಹಾನಗಲ್ಲ: ಡೆಂಘೀಯಿಂದ ದೂರ ಉಳಿಯಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸುವ ಅಗತ್ಯವಿದ್ದು, ಗ್ರಾಮಗಳ ಸ್ವಚ್ಛತೆಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ತಲಾ ರು. 50 ಸಾವಿರ ರು. ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಮನೋಹರ ತಹಸೀಲ್ದಾರ್ ತಿಳಿಸಿದರು.
ಗುರುವಾರ ಹಾನಗಲ್ಲಿನಲ್ಲಿ ಕರವೇ, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ ಆಶ್ರಯದಲ್ಲಿ ನಡೆದ ಡೆಂಘೀ ಜ್ವರದ ನಿಯಂತ್ರಣ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
50 ಸಾವಿರ: ರೋಗ ತಗಲುವ ಮೊದಲು ಮುಂಜಾಗೃತ ಕ್ರಮ ಜರುಗಿಸುವುದು ಉಚಿತ. ಕೇವಲ ಸರ್ಕಾರದ ಇಲಾಖೆಗಳು ಮಾತ್ರವಲ್ಲ, ಸಾರ್ವಜನಿಕರು ಕೂಡ ಡೆಂಘೀ ತಡೆಯುವಲ್ಲಿ ಸಹಕರಿಸಬೇಕು. ಡೆಂಘೀ ರೋಗದ ಕಾರಣದಿಂದಲೇ ಗ್ರಾಮ ಪಂಚಾಯತಿಗಳಿಗೆ ಸ್ವಚ್ಛತೆಗಾಗಿ ತಲಾ ರು. 50 ಸಾವಿರ ನೀಡಲಾಗಿದೆ. ಫಾಗಿಂಗ್ ಇನ್ನಿತರ ಔಷಧಿ ಸಿಂಪರಣೆ ಮೂಲಕ ರೋಗ ತಡೆಗಟ್ಟು ಕಾರ್ಯ ನಡೆಸಬೇಕು. ಪ್ರಸಕ್ತ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೇ ಡೆಂಘೀ ಜ್ವರ ಪೀಡಿತರಿಗೆ ಎಲ್ಲ ಚಿಕಿತ್ಸೆ ಒದಗಿಸುವ ಏರ್ಪಾಡು ಮಾಡಲಾಗುತ್ತಿದೆ ಎಂದರು.
ನಂತರ ನಡೆದ ಸಭೆಯಲ್ಲಿ ಆರೋಗ್ಯ ಮಾಹಿತಿ ನೀಡಿದ ಹಾವೇರಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಮಾರುತಿ ಚಿಕ್ಕಣ್ಣನವರ ಮಾತನಾಡಿ, ಡೆಂಘೀ ರೋಗಕ್ಕೆ ಭೀತಿ ಪಡುವ ಅಗತ್ಯವಿಲ್ಲ. ನಿಷ್ಕಾಳಜಿ ಮಾಡದೆ ಸಕಾಲಿಕವಾಗಿ ಔಷಧೋಪಚಾರ ಪಡೆಯಬೇಕು. ಇದಕ್ಕೂ ಮುನ್ನ ಮನೆ ಹಾಗೂ ಮನೆಯ ಸುತ್ತಲ ಪರಿಸರ ಶುದ್ಧವಾಗಿಟ್ಟುಕೊಳ್ಳಬೇಕು ಎಂದರು.
ಕೇವಲ ಒಂದು ಮನೆಯವರ ಕಾಳಜಿಯಿಂದ ಸಾಧ್ಯವಿಲ್ಲ. ಸಮುದಾಯ ಜಾಗೃತವಾಗಿ ಸ್ವಚ್ಛತೆ ಹಾಗೂ ಶುದ್ಧ ಪರಿಸರ ನಿರ್ಮಿಸಿಕೊಂಡಲ್ಲಿ ಇಂಥ ರೋಗಗಳಿಂದ ಮುಕ್ತರಾಗಿರಬಹುದು ಎಂದ ಅವರು ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತರು ಪ್ರತಿ ಗ್ರಾಮ ಹಾಗೂ ಮನೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿ.ಎಸ್. ಬಡಿಗೇರ, ಎನ್.ಎಸ್. ಪಡೆಪ್ಪನವರ, ಮಾಜಿ ತಾಪಂ ಸದಸ್ಯ ದಾನಪ್ಪ ಗಂಟೇರ, ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ, ತಾಪಂ ಇಓ ಮನೋಜಕುಮಾರ ಗಡಬಳ್ಳಿ, ಡಾ ಕುರಿ, ಡಾ ರಾಜೇಂದ್ರ ಗೊಡ್ಡೆಮ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಅರ್. ಶೆಟ್ಟರ್ ಮತ್ತಿತರರು ಇದ್ದರು.