ರಾಷ್ಟ್ರಗೀತೆ, ನಾಡಗೀತೆ ಹಾಡಿದರೆ ಮಕ್ಕಳಿಗೆ ಹಾಕ್ತಾರೆ ಏಟು!
ಬ್ಯಾಡಗಿ: ಪಟ್ಟಣದ ಸೇಂಟ್ ವಿಯೆನ್ನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಗೂ ನಾಡಗೀತೆ ಹೇಳಿಸುವುದನ್ನು ಸ್ಥಗಿತಗೊಳಿಸುವ ಮೂಲಕ ಅವಮಾನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕಳೆದೊಂದು ವಾರದಿಂದ ಶಾಲೆಯಲ್ಲಿ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಮಕ್ಕಳಿಂದ ಹೇಳಿಸುವ ಬದಲಾಗಿ ಧ್ವನಿವರ್ಧಕ ಮೂಲಕ ಕೇಳಿಸಲಾಗುತ್ತಿದೆ. ರಾಷ್ಟ್ರಾಭಿಮಾನವನ್ನು ಮೂಡಿಸುವ ಉದ್ದೇಶದಿಂದ ನಿತ್ಯವೂ ಮಕ್ಕಳ ಬಾಯಿಂದಲೇ ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಿಸಲಾಗುತ್ತದೆ. ಆದರೆ, ನಿಯಮ ಉಲ್ಲಂಘಿಸಿರುವ ಸೇಂಟ್ ವಿಯೆನ್ನಾ ಶಾಲೆಯ ಕಾರ್ಯವೈಖರಿಯನ್ನು ಪಾಲಕರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೇಂಟ್ ವಿಯೆನ್ನಾ ಶಾಲೆಯಲ್ಲಿನ ಶಿಕ್ಷಕಿಯರು, ಧ್ವನಿವರ್ಧಕದಲ್ಲಿ ರಾಷ್ಟ್ರಗೀತೆ ಹಾಗೂ ನಾಡಗೀತೆಗಳನ್ನು ಕೇಳಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿ ಮಕ್ಕಳು ಹಾಡನ್ನು ಹಾಡಿದರೆ ಶಿಕ್ಷೆ ತಪ್ಪಿದ್ದಲ್ಲ. ಸಾಲಿನಲ್ಲಿ ನಿಂತಿರುವ ಶಿಕ್ಷಕಿಯರು ಹಾಡು ಹೇಳುವ ವಿದ್ಯಾರ್ಥಿಗಳಿಗೆ ಕೋಲಿನ ರುಚಿ ತೋರಿಸುತ್ತಾರೆ. ಶಾಲೆಗೆ ಮಕ್ಕಳನ್ನು ಕಳಿಸುವುದು ಕೇವಲ ಶಿಕ್ಷಣಕ್ಕಾಗಿ ಅಲ್ಲ, ರಾಷ್ಟ್ರಾಭಿಮಾನ ಮೂಡಿಸುವುದು ಕೂಡ ಶಿಕ್ಷಣದ ಒಂದು ಉದ್ದೇಶವಾಗಿದೆ. ಇಂಥ ವರ್ತನೆಗಳಿಗೆ ಶಿಕ್ಷಣ ಇಲಾಖೆ ಕಡಿವಾಣ ಹಾಕಬೇಕಾಗಿದೆ ಎಂದು ಪಾಲಕರು ಆಗ್ರಹಿಸಿದ್ದಾರೆ.
ಮೊಕದ್ದಮೆ ದಾಖಲಿಸಿ: ಆಂಗ್ಲ ಮಾಧ್ಯಮ ಹೊಂದಿರುವ ಖಾಸಗಿ ಶಾಲೆಗಳಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ಹೆಚ್ಚು. ರಾಷ್ಟ್ರಗೀತೆ ಹಾಗೂ ನಾಡಗೀತೆ ಹೇಳಿಸುವುದನ್ನು ಸ್ಥಗಿತಗೊಳಿಸಿರುವ ಸೇಂಟ್ ವಿಯೆನ್ನಾ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಿದ್ಯಾರ್ಥಿ ಮುಖಂಡ ಮಂಜುನಾಥ, ವಿಜಯಕುಮಾರ ಶಿಡ್ಲಣ್ಣನವರ ಆಗ್ರಹಿಸಿದ್ದಾರೆ.