ಪಡಿತರ ಧಾನ್ಯ ಅಕ್ರಮ ಮಾರಾಟ: ದೂರು
ಶಿಗ್ಗಾಂವಿ: ಪಡಿತರ ಧಾನ್ಯ ಅಕ್ರಮ ಮಾರಿ ಪಡಿತರ ಕಾರ್ಡ್‌ದಾರರಿಗೆ ಧಾನ್ಯ ನೀಡದೆ ಅವರಿಗೆ ಧಮಕಿ ಹಾಕುತ್ತಿದ್ದಾರೆಂದು ತಾಲೂಕಿನ ದುಂಡಶಿ ಗ್ರಾಪಂ ಸದಸ್ಯ ಎ.ಪಿ. ಮುಲ್ಲಾ, ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ದುಂಡಶಿ ಗ್ರಾಮದ ವ್ಯವಸಾಯ ಸಹಕಾರಿ ಸಂಘದಲ್ಲಿ ನೀಡುತ್ತಿರುವ ಪಡಿತರ ಆಹಾರ ಧಾನ್ಯವನ್ನು ನೀಡುತ್ತಿಲ್ಲ. ನಮ್ಮ ಕಾರ್ಡ್‌ನ ಧಾನ್ಯ ನೀಡುವಂತೆ ಸಂಘದಲ್ಲಿ ಹೋಗಿ ಕೇಳಿದರೆ ಆಹಾರ ಧಾನ್ಯ ಮುಗಿದಿದೆ ಎಂದು ಹೇಳುತ್ತಾರೆ. ಆದರೆ, ಸರ್ಕಾರದಿಂದ ಬಂದ ಆಹಾರ ಧಾನ್ಯವು ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಗ್ರಾಮಸ್ಥರದ್ದಾಗಿದೆ. ನಿತ್ಯವೂ ನೂರಾರು ಕಾರ್ಡ್‌ದಾರರಿಗೆ ಪಡಿತರ ಧಾನ್ಯ ನೀಡದ್ದು ಆಕ್ರೋಶಕ್ಕೆ ಕಾರಣವಾಗಿದೆ. ದುಂಡಶಿ ವ್ಯವಸಾಯ ಸಹಕಾರಿ ಸಂಘವು ದುಂಡಶಿ, ಮಡ್ಲಿ, ಅ.ಮ.ಕೊಪ್ಪ, ಬಿ.ಬಸಾಪುರ, ತಾಂಡಾ ಗ್ರಾಮಗಳ ವ್ಯಾಪ್ತಿಗೆ ಬರುತ್ತದೆ. ಪ್ರತಿ ತಿಂಗಳು 15ರಿಂದ 25ರ ವರೆಗೆ ಪಡಿತರ ನೀಡುವ ವ್ಯವಸ್ಥೆ ಕಲ್ಪಿಸಿದೆ. ಆದರೆ, ಮೊದಲ ವಾರ ಆಹಾರ ಧಾನ್ಯ ಮುಗಿದಿದೆ ಎನ್ನುತ್ತಾರೆ. ಸಂಘದ ಅಧ್ಯಕ್ಷ ನಿಂಗಪ್ಪ ಕೊಳೂರ ಅವರನ್ನು ಕೇಳಿದರೆ ಧಾನ್ಯ ಮುಗಿದಿದೆ ಎನ್ನುತ್ತಾರೆ. ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ಮುಲ್ಲಾ, ದುಂಡಶಿ, ಮಡ್ಲಿ, ಅ.ಮ.ಕೊಪ್ಪ, ಬಿ.ಬಸಾಪುರ, ಗ್ರಾಮಸ್ಥರು ಆಗ್ರಹಿಸಿದ್ದಾರೆ.