ಚರಂಡಿ ಸ್ವಚ್ಛಗೊಳಿಸಿ, ಸೌಲಭ್ಯ ಕಲ್ಪಿಸಿ: ಆಗ್ರಹ
ಹಿರೇಕೆರೂರು: ತಾಲೂಕಿನ ಆರಿಕಟ್ಟಿ ಗ್ರಾಮದಲ್ಲಿ ಗ್ರಾಮ ಚರಂಡಿಗಳನ್ನು ಸ್ವಚ್ಛಗೊಳಿಸದೆ ಕೊಳಚೆ ಗ್ರಾಮವಾಗಿದ್ದು ತಕ್ಷಣ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆಹಾಗೂ ಮೂಲ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆರಿಕಟ್ಟಿ ಗ್ರಾಮದಲ್ಲಿರುವ ಚರಂಡಿಗಳು ಮುಚ್ಚಿವೆ. ಎಲ್ಲೆಂದರಲ್ಲಿ ಕಲುಷಿತ ನೀರು ಹಾರಿಯುತ್ತಿದೆ. ಇದರಿಂದಾಗಿ ಸೊಳ್ಳೆಗಳು ಗ್ರಾಮದಲ್ಲಿ ವಿಪರೀತವಾಗಿವೆ. ಜನತೆ ಡೆಂಘಿ ಮತ್ತು ಚಿಕುನ್ ಗುನ್ಯಾ ರೋಗಗಳಿಂದ ಬಳಲುತ್ತಿದ್ದಾರೆ. ಗ್ರಾಮದಲ್ಲಿರುವ ವಾರ್ಡ್ ಸದಸ್ಯರು ಈ ಬಗ್ಗೆ ಗೊತ್ತಿದ್ದರೂ ಜನತೆಯ ಸಂಕಷ್ಟಕ್ಕೆ ಸಹಕರಿಸುತ್ತಿಲ್ಲ.
ಕುಡಿವ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ನಳಗಳಿಗೆ ಸಂಪರ್ಕ ಇರುವ ಪೈಪ್‌ಗಳು ಒಡೆದು ಕಲುಷಿತ ನೀರು ಹರಿಯುತ್ತಿದೆ. ಇದು ಗ್ರಾಮದ ಜನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಈ ಕುರಿತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಹೋದರೂ ಗೈರು ಇರುತ್ತಾರೆ. ಇದರಿಂದಾಗಿ ಗ್ರಾಮದ ಜನತೆಗೆ ಸಿಗುವ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ. ಸರ್ಕಾರದ ಯಾವುದೆ ಯೋಜನೆಗಳನ್ನು ಗ್ರಾಮಸಭೆಯ ಮೂಲಕ ಠರಾವು ಮಾಡುತ್ತಿಲ್ಲ. ಈ ಎಲ್ಲ ತೊಂದರೆಗಳಿಂದ ಆರಿಕಟ್ಟಿ ಜನತೆ ರೋಸಿ ಹೋಗಿದ್ದು ಸರಿಯಾದ ವ್ಯವಸ್ಥೆ ಮಾಡದೆ ಇದ್ದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಕಾರ್ಯಕರ್ತರಾದ ವಿನಾಯಕ ದೇವರಹಳ್ಳಿ, ಪ್ರದೀಪ ಹಡಪದ ಮೊದಲಾದವರು ಎಚ್ಚರಿಸಿದ್ದಾರೆ.