ದಶಕದಲ್ಲಿ ಭಾರತ ಜಗತ್ತಿನಲ್ಲಿಯೇ ನಂ. 1: ಹರೀಶ ಭಟ್
ಹಾವೇರಿ: ಅವಶ್ಯಕತೆಯೇ ಆವಿಷ್ಕಾರಕ್ಕೆ ಮೂಲ. ಹತ್ತಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತದಲ್ಲಿ ಆವಿಷ್ಕಾರಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. 1920-25ರ ಹೊತ್ತಿಗೆ ವಿಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತೆ ಬೆರಗುಗೊಳ್ಳುವಂತೆ ಸಂಶೋಧನೆಗಳು ನಡೆಯುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ. ದಶಕ ಉರುಳುವ ಹೊತ್ತಿಗೆ ವಿಜ್ಞಾನ ಕ್ಷೇತ್ರದಲ್ಲಿ ನಂ-1 ರಾಷ್ಟ್ರವಾಗುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭಾರತೀಯ ವಿಜ್ಞಾನ ಮಂದಿರದ ಹಿರಿಯ ಪರಿಸರ ವಿಜ್ಞಾನಿ ಡಾ ಹರೀಶ ಭಟ್ ಅಭಿಮತ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ಜಿಲ್ಲಾ ವಿಜ್ಞಾನ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಗರದ ಹೊಸಮಠದ ಸಭಾಭವನದಲ್ಲಿ ಮಂಗಳವಾರ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಅಂಗವಾಗಿ ಏರ್ಪಡಿಸಲಾಗಿದ್ದ ಹಾವೇರಿ ಜಿಲ್ಲಾ ಮಾರ್ಗದರ್ಶಿ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಪೂರ್ವಭಾವಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆವಿಷ್ಕಾರದಲ್ಲಿ ತೊಡಗಿ: ಶೇ. 60ರಷ್ಟು ವಿಜ್ಞಾನಿಗಳನ್ನು ಹೊಂದಿರುವ ಅಮೆರಿಕದವರ ಬುದ್ಧಿಶಕ್ತಿ ಮೀರಿಸುವಷ್ಟು ಸಾಮಾನ್ಯ ಜ್ಞಾನ ಭಾರತೀಯರಿಗಿರುವುದು ಸಾಬೀತಾಗಿದೆ. ಜೋಗ ಜಲಪಾತದಂತಹ ದೊಡ್ಡ ದೊಡ್ಡ ಪ್ರಪಾತಗಳಿಂದ ಧುಮುಕುವ ನೀರಿನಿಂದ ವಿದ್ಯುತ್ ಉತ್ಪಾದನೆಗಿಂತಲೂ ನಳದ ನೀರಿನಿಂದ ಹನಿಹನಿಯಾಗಿ ಸೋರಿಕೆಯಾಗುವ ನೀರಿನಿಂದಲೇ ಶಕ್ತಿ ಉತ್ಪಾದನೆಯಂತಹ ಸರಳ ಆವಿಷ್ಕಾರಗಳನ್ನು ಮಾಡುವತ್ತ ವಿಜ್ಞಾನಿಗಳು ಚಿತ್ತ ಹರಿಸಬೇಕಾಗಿದೆ ಎಂದು ಡಾ ಭಟ್ ಕರೆ ನೀಡಿದರು.
ಪ್ರತಿಭೆ ತೋರಿಸಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಎಂ.ಡಿ. ಬಳ್ಳಾರಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳ ಪ್ರಯೋಜನ ಪಡೆದು, ಜಿಲ್ಲೆಯ ಮಕ್ಕಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದವರೆಗೂ ಪ್ರಶಸ್ತಿ ಪಡೆಯುವಂತೆ ಮಾರ್ಗದರ್ಶನ ಮಾಡಲು ಶಿಕ್ಷಕರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ವಿಜ್ಞಾನ ಚಟುವಟಿಕ ವ್ಯವಸ್ಥಿತವಾಗಿ ನಡೆಯುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಐನ್‌ಸ್ಟಿನ್ ಪ್ರತಿಭೆ ಮರುಕಳಿಸಲಿ: ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿಗಳು ಮಾತನಾಡಿ, ಎಲ್ಲ ಶಕ್ತಿಗಿಂತಲೂ ಇಚ್ಛಾಶಕ್ತಿ ದೊಡ್ಡದು. ವಿಜ್ಞಾನದ ಸಂಶೋಧನೆಗೆ ಇಚ್ಛಾಶಕ್ತಿ ಮುಖ್ಯ ಎಂದು ಜಗತ್ ಪ್ರಸಿದ್ಧ ವಿಜ್ಞಾನಿ ಐನ್‌ಸ್ಟಿನ್ ಅವರ ಉದಾಹರಣೆ ಮೂಲಕ ತಿಳಿಸಿದರು. ನಗರದ ಸಿ.ಬಿ. ಪಾಲಿಟೆಕ್ನಿಕ್ ಮಹಾವಿದ್ಯಾಲಯ ಪ್ರಾಚಾರ್ಯ ಬಿ. ಚನ್ನಪ್ಪ, ವಿಷಯ ಪರಿವೀಕ್ಷಕ ಆರ್.ಎನ್. ಹುರುಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಭಾರತೀಯ ವಿಜ್ಞಾನ ಮಂದಿರದ ದಕ್ಷಿಣ ಭಾರತ ಮಟ್ಟದ ಸಂಯೋಜಕಿ ಡಾ ಹನ ಮುರುಘನ, ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಉಪನ್ಯಾಸಕಿ ಸ್ನೇಹಲತಾ ತೆಂಗಳಿ ಹಾಗೂ ಎಂ.ಐ. ದೊಡ್ಡಮನಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಆರ್.ಎಸ್. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಿ.ಎಸ್. ಹತ್ತಿಮತ್ತೂರು ನಿರೂಪಿಸಿದರು.