ಪಿಯು ಪಠ್ಯಪುಸ್ತಕ ವಿತರಿಸಿ: ಪ್ರತಿಭಟನೆ
ಹಾವೇರಿ: ಪಿಯು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಕ್ಷಣ ವಿತರಿಸಬೇಕು ಹಾಗೂ ಸರ್ಕಾರಿ ಕಾಲೇಜ್ಗಳಲ್ಲಿ ಉಪನ್ಯಾಸಕರನ್ನು ನೇಮಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಮುನ್ಸಿಪಲ್ ಮೈದಾನದಿಂದ ಪ್ರತಿಭಟನಾ ಮೆರವಣೆಗೆ ನಡೆಸಿದ ಕಾರ್ಯಕರ್ತರು, ಜಿ.ಎಚ್. ಪಟೇಲ್ ವೃತ್ತದ ಮೂಲಕ ಸಿದ್ದಪ್ಪ ವೃತ್ತದಲ್ಲಿ 30 ನಿಮಿಷಕ್ಕೂ ಹೆಚ್ಚು ಕಾಲ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿಗಳು ಆರಂಭವಾಗಿದ್ದರೂ ಈವರೆಗೂ ಪಠ್ಯಪುಸ್ತಕಗಳು ದೊರಕುತ್ತಿಲ್ಲ ಎಂದು ಆರೋಪಿಸಿದರು. ಸಮಯ ಪಾಲನೆ ಮತ್ತು ಪಠ್ಯಗಳ ವಿಳಂಬವಾಗುವುದರಿಂದ ಉಪನ್ಯಾಸಕರಿಗೂ ಬೋಧನೆ ಮಾಡುವಲ್ಲಿ ಒತ್ತಡವಾಗುತ್ತದೆಯಲ್ಲದೇ, ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಬೀರಲಿದೆ. ಆದ್ದರಿಂದ ಸರ್ಕಾರ, ಆದ್ಯತೆ ಮೇರೆಗೆ ಪಠ್ಯಪುಸ್ತಕ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ನೇಮಕಕ್ಕೆ ಆಗ್ರಹ: ರಾಜ್ಯದ ಬಹುತೇಕ ಸರ್ಕಾರಿ ಕಾಲೇಜ್ಗಳಲ್ಲಿ ಉಪನ್ಯಾಸಕರ ಕೊರತೆಯಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಉಪನ್ಯಾಸಕರ ನೇಮಕಕ್ಕೆ ತಕ್ಷಣವೇ ಸರ್ಕಾರ ಕ್ರಮಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು.
ಖಂಡನೆ: ಹಿಂದಿನ ಸರ್ಕಾರ ನಾಮ ನಿರ್ದೇಶಿಸಿದ್ದ ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿವಿಗಳ ಸಿಂಡಿಕೇಟ್ ಸದಸ್ಯತ್ವವನ್ನು ಹಾಲಿ ಕಾಂಗ್ರೆಸ್ ಸರ್ಕಾರ ರದ್ದು ಮಾಡಿ ಆದೇಶಿಸಿದನ್ನು ಎಬಿವಿಪಿ ಗಣೇಶ ಹಂಬಲಿ ಖಂಡಿಸಿದರು. ವಿವಿಯ ಸಿಂಡಿಕೇಟ್ ಸದಸ್ಯತ್ವವನ್ನು ಏಕಾಏಕಿ ರದ್ದುಪಡಿಸಿದ್ದರಿಂದ ವಿವಿಗಳ ಅಸ್ಥಿರತೆ ಉಂಟಾಗಲು ಸಾಧ್ಯ. ಆದ್ದರಿಂದ ಸರ್ಕಾರ ಈ ಕುರಿತಂತೆ ಮತ್ತೊಮ್ಮೆ ತನ್ನ ಆದೇಶ ಪರಿಶೀಲಿಸಬೇಕು ಎಂದು ಎಂದೂ ಹಂಬಲಿ ಆಗ್ರಹಿಸಿದರು. ನಗರ ಕಾರ್ಯದರ್ಶಿ ಸಾಗರ ಅಂಗಡಿ, ಪರಶುರಾಮ ತಳವಾರ, ಅಬ್ಬಾಸ್ಅಲಿ ಬಾಳಿಕಾಯಿ, ಕಿರಣ ಕೋಣ್ಣನವರ, ಗುರುಸಿದ್ದಪ್ಪ ಹಿರೇಮಠ ಮತ್ತಿತರರು ಇದ್ದರು.
ಇಂದು ಕಾರ್ಯಾಗಾರ
ಹಾನಗಲ್ಲ: ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಹಾಗೂ ಜೀವಿ ವೈವಿಧ್ಯ ಸಂರಕ್ಷಣೆ ಕಾರ್ಯಾಗಾರ ಜೂ. 27ರಂದು ಬೆಳಗ್ಗೆ 10ಕ್ಕೆನಡೆಯಲಿದೆ. ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆಯುವ ಕಾರ್ಯಾಗಾರದ ಉದ್ಘಾಟನೆಯನ್ನು ಪ್ರಾಚಾರ್ಯ ಎಸ್.ಸಿ. ಪೀರಜಾದೆ ನೆರವೇರಿಸುವರು. ಸಾಹಿತಿ ಮಾರುತಿ ಶಿಡ್ಲಾಪುರ, ಶೆಷಗಿರಿ ಕಲಾ ತಂಡದ ಅಧ್ಯಕ್ಷ ಪ್ರಭು ಗುರಪ್ಪನವರ, ಉಪನ್ಯಾಸಕ ಎಂ.ಆರ್. ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಾಚಾರ್ಯ ಎನ್. ಅಡವೀಶ ಅಧ್ಯಕ್ಷತೆ ವಹಿಸುವರು ಎಂದು ಸಂಚಾಲಕ ಪ್ರೊ. ನಾಗರಾಜ ಧಾರೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.