ಕಾಂಗ್ರೆಸ್ ಮುಖಂಡರಿಂದ ಸಚಿವರಿಗೆ ಮನವಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜೂ. 29
ಸವಣೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಬೆಂಗಳೂರಿಗೆ ತೆರಳಿ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಎಚ್. ಆಂಜನೇಯ ಅವರಿಗೆ ಶಿಗ್ಗಾಂವಿ ತಾಲೂಕಿನ ಕೊಣನಕೆರಿ ಹಾಗೂ ಹುಲಗೂರು ಗ್ರಾಮಕ್ಕೆ ಪರಿಶಿಷ್ಟ ಪಂಗಡದ ಮೊರಾರ್ಜಿ ವಸತಿ ಶಾಲೆಗೆ ಮಂಜೂರಾತಿ ನೀಡಬೇಕೆಂದು ಮನವಿ ಸಲ್ಲಿಸಿದರು.
ಶಿಗ್ಗಾಂವಿ-ಸವಣೂರು ಎರಡೂ ತಾಲೂಕುಗಳಲ್ಲಿಯ ಪರಿಶಿಷ್ಟ ಜಾತಿ- ಪಂಗಡ ಇತರೆ ಹಿಂದುಳಿದ ವರ್ಗಗಳ ಎಲ್ಲ ಜಾತಿಯ ಜನಾಂಗಗಳಿಗೆ ತಮ್ಮ ಇಲಾಖೆಯಲ್ಲಿ ಬರುವ ಗಂಗಾ ಕಲ್ಯಾಣ ನೀರಾವರಿ ಯೋಜನೆಯ ವೈಯಕ್ತಿಕ ಕೊಳವೆ ಬಾವಿ, ಹೈನುಗಾರಿಕೆ, ನೇರ ಸಾಲ, ಕುಶಲಕರ್ಮಿ, ಸ್ವಯಂ ಉದ್ಯೋಗ, ಅಲ್ಲದೆ ಅಂಗವಿಕಲರಿಗೂ ಉದ್ಯೋಗವಕಾಶ ನೀಡಲು ಬರುವ ಬಜೆಟ್ನಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಶಿಗ್ಗಾಂವಿ-ಸವಣೂರು ಕಾಂಗ್ರೆಸ್ ನಿಯೋಗ ಸಚಿವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುರನಗೌಡ ಪಾಟೀಲ, ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯದರ್ಶಿ ಶಿವಾನಂದ ರಾಮಗೇರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ವೈ. ಪಾಟೀಲ, ಪರಿಶಿಷ್ಟ ಪಂಗಡ ಕಾಂಗ್ರೆಸ್ ಕಾರ್ಯದರ್ಶಿಗಳಾದ ಚಂದ್ರಶೇಖರ ಜುಟ್ಟಲ್ ಹಾಗೂ ಕೆಪಿಸಿಸಿ ಎಸ್ಟಿ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಮಾಜಿ ತಾಪಂ ಸದಸ್ಯ ಯುಸೂಫ್ಸಾಬ್ ಬಾವಿಕಟ್ಟಿ, ಗ್ರಾಪಂ ಸದಸ್ಯ ಮುದಕಪ್ಪ ಹೊಸಪೇಟಿ ಇನ್ನಿತರರು ಇದ್ದರು.