ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಳಪೆ ರಸ್ತೆ ಕಾಮಗಾರಿ: ಘೇರಾವ್

Lingaraj Badiger
Updated On : 2 Mar 2013, 10:50 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮಾ.1
ತಾಲೂಕಿನ ಬಹುತೇಕ ರಸ್ತೆಗಳು ಕಿತ್ತು ಹೋಗಿವೆ. ಎಲ್ಲ ಕಾಮಗಾರಿಗಳಲ್ಲಿ ಗುತ್ತಿಗೆದಾರರು ತಮಗೆ ಬೇಕಾದ ಹಾಗೆ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಆದರೂ ಇಲಾಖೆ ಅಭಿಯಂತರರು ಮೆಲ್ವಿಚಾರಣೆ ನಡೆಸುತ್ತಿಲ್ಲ. ಈ ಬಗ್ಗೆ ವಿಚಾರಿಸಲು ಲೋಕೋಪಯೋಗಿ ಇಲಾಖೆಗೆ ತೆರಳಿದರೆ ನಾಲ್ಕು ತಿಂಗಳಿಂದ ಕೈಗೆ ದೊರೆಯುತ್ತಿಲ್ಲ ಎಂದು ಆರೋಪಿಸಿದ ರೈತ ಮುಖಂಡರು ತಹಸೀಲ್ದಾರ್ ಕಚೇರಿ ಆವರಣದ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಎಂ.ಬಿ. ತುರಮುರಿ ಅವರಿಗೆ ಘೇರಾವ್ ಹಾಕಿ ತೀವ್ರ ತರಾಟೆ ತೆಗೆದುಕೊಂಡರು.
ಬಳಿಕ ಮಧ್ಯಾಹ್ನ ವೇಳೆಗೆ ಕಚೇರಿಗೆ ಆಗಮಿಸಿದ ಎಂ.ಬಿ. ತುರಮುರಿ ಹಾಗೂ ಸಿಬ್ಬಂದಿಯನ್ನು ಒಳಗೆ ಕೂಡಿ ಹಾಕಿ, ಗೇಟ್‌ಗೆ ಬೀಗ ಜಡಿದು ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ತಾಲೂಕಿನಲ್ಲಿ ಗುತ್ತಿಗೆದಾರರು ಹಾಗೂ ಅಭಿಯಂತರರು ಶಾಮೀಲಾಗಿ ಕಮೀಷನ್ ಒಪ್ಪಂದ ಮಾಡಿಕೊಂಡು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಭಾಗದಲ್ಲಿ ಕಾಮಗಾರಿ ನಿರ್ವಹಿಸದೆ ಬಿಲ್ ತೆಗೆಯಲಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ದೂರಿದರು. ಜಿಪಂ ಸದಸ್ಯ ಬಸವರಾಜ ಬೇವಿನಹಳ್ಳಿ ಮಾತನಾಡಿ, ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಜನಪ್ರತಿನಿಧಿಗಳು ಕಳೆದ ನಾಲ್ಕು ತಿಂಗಳಿಂದ ದೂರವಾಣಿ ಮೂಲಕ ಸಂಪರ್ಕಿಸಿದರೂ ಕರೆ ಸ್ವೀಕರಿಸುತ್ತಿಲ್ಲ. ವಿವಿಧ ಸಭೆ ಹಾಗೂ ಕಾರ್ಯಕ್ರಮಗಳಿಗೂ ಎಇಇ ಹಾಜರಾಗುತ್ತಿಲ್ಲ. ಪ್ರತಿನಿಧಿಗಳು ಜನತೆಗೆ ಏನು ಉತ್ತರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಬಗ್ಗೆ ಕಳಕಳಿ ಇಲ್ಲದ ಅಧಿಕಾರಿಗಳು ತಾಲೂಕಿಗೆ ಬೇಡ. ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲದಿದ್ದರೇ ಬೇರೆಡೆ ವರ್ಗಾವಣೆ ಮಾಡಿಕೊಂಡು ತೊಲಗಿ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಬಸನಗೌಡ ಕಳ್ಳೇರ, ರೈತ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಗಂಗಪ್ಪಳ್ಳವರ, ಸೋಮಪ್ಪ ಚಪ್ಪರದಹಳ್ಳಿ, ದೇವಿಂದ್ರಪ್ಪ ತಳವಾರ, ಹೇಮನಗೌಡ ಪಾಟೀಲ, ಕಲ್ಲಪ್ಪ ಕಣ್ಣಿಗೇರ, ನಾಗರಾಜ ನೀರಲಗಿ, ಉಜ್ಜಪ್ಪ ಮುದಿಗೌಡ್ರ, ರಾಜು ಹಡಗದ, ಹೂವನಗೌಡ ಮಳವಳ್ಳಿ, ಶಿವನಗೌಡ ಆರಿಕಟ್ಟಿ, ಮಲ್ಲಿಕಾರ್ಜುನ ಪಾಟೀಲ, ಹನುಮಗೌಡ ಮೂಲಿಮನಿ, ಗಂಗನಗೌಡ ಮುದಿಗೌಡ್ರ, ರಾಜು ಕುಂಕುಮಗಾರ, ಕಲ್ಲಪ್ಪ ಆರೀಕಟ್ಟಿ, ಶಂಕ್ರಪ್ಪ ಮಕ್ಕಳ್ಳಿ, ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement