ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ?
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 3
ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಕೆಲವೆಡೆ ಬ್ಯಾನರ್ ಹಾಗೂ ಬಂಟಿಂಗ್ ಕಟ್ಟುವ ಮೂಲಕ ಸಂಹಿತೆ ಉಲ್ಲಂಘನೆಯಾಗಿದ್ದರೂ ಚುನಾವಣಾಧಿಕಾರಿಗಳು ಗಮನಿಸದೇ ಇರುವುದು ಅಚ್ಚರಿ ಮೂಡಿಸಿದೆ.
ವಿವಿಧ ನಾಯಕರ ಫೋಟೋಗಳು ಇರುವ ಕಟೌಟ್, ಬ್ಯಾನರ್ ಹಾಗೂ ಬಂಟಿಂಗ್ಸ್ಗಳು ನಗರದಲ್ಲಿ ಇಂದಿಗೂ ರಾರಾಜಿಸುತ್ತಿವೆ. ಚುನಾವಣಾ ಅಧಿಸೂಚನೆ ಹೊರಬಿದ್ದ ಕೂಡಲೇ ಎಲ್ಲ ಸರ್ಕಾರಿ ಕಚೇರಿಗಳಲ್ಲಿರುವ ಮಂತ್ರಿಗಳ ಫೋಟೋ ಹಾಗೂ ಸರ್ಕಾರದ ಕಾರ್ಯಕ್ರಮ ಪ್ರಚುರಪಡಿಸುವ ಎಲ್ಲ ಬೋರ್ಡ್ಗಳನ್ನು ತೆರವುಗೊಳಿಸಲಾಗುತ್ತದೆ.
ನಿಯಮದಂತೆ ಪಕ್ಷಗಳ ಧ್ವಜ, ಮುಖಂಡರ ಭಾವಚಿತ್ರವಿರುವ ಬ್ಯಾನರ್, ಬಂಟಿಂಗ್ಸ್ ಬಳಸಲು ಅಭ್ಯರ್ಥಿಯು ನಿಗದಿತ ಸ್ಥಳ ಹಾಗೂ ಸಮಯದ ನಿಬಂಧನೆಗೊಳಪಟ್ಟು ಚುನಾವಣಾಧಿಕಾರಿ ಬಳಿ ಪೂರ್ವಾನುಮತಿ ಪಡೆಯುವುದು ಅಗತ್ಯ. ಕಾರ್ಯಕ್ರಮ ಮುಗಿದ ಬಳಿಕ 2 ತಾಸುಗಳಲ್ಲಿ ಅವುಗಳನ್ನು ತೆರವುಗೊಳಿಸಬೇಕು. ಆದರೂ ಪಟ್ಟಣದ ಬಹುತೇಕ ಕಡೆಗಳಲ್ಲಿ ಬ್ಯಾನರ್, ಬಂಟಿಂಗ್ಸ್ ಹಾಗೂ ಹೋರ್ಡಿಂಗ್ಗಳು ಹಾಗೇ ಇವೆ. ಅದರಲ್ಲೂ ಮುಖ್ಯರಸ್ತೆಯಲ್ಲಿ ಪಕ್ಷವೊಂದರ ಮುಖಂಡರ ಭಾವಚಿತ್ರವಿರುವ ಹೋರ್ಡಿಂಗ್ ಗಮನ ಸೆಳೆಯುವಂತಿದೆ. ಇನ್ನಾದರೂ ಚುನಾವಣಾಧಿಕಾರಿಗಳು ಎಚ್ಚೆತ್ತು ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.