ಬೆರಗು ಮೂಡಿಸಿದ ವಿಜ್ಞಾನ ಮಾದರಿ
ಹಾವೇರಿ: ಅವನು 5ನೇ ತರಗತಿ ಬಾಲಕ. ಬಳಸಿ ಬಿಸಾಡಿದ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ಲಿಂಬೆರಸ ಬಲೂನೊಂದರಲ್ಲಿ ಅಡಿಗೆ ಸೋಡಾ ಹಾಕಿ ಬಲೂನಿನ ಬಾಯಿಯನ್ನು ಬಾಟಲಿ ಬಾಯಿಗೆ ಸೇರಿಸಿದ್ದಾನೆ. ನೋಡ ನೋಡುತ್ತಿದ್ದಂತೆ ಬಲೂನು ಉಬ್ಬಿಕೊಳ್ಳಲಾರಂಭಿಸುತ್ತದೆ. ಬಲೂನು ಉಬ್ಬಿದಂತೆ ಆ ಬಾಲಕನ ಮುಖದಲ್ಲಿ ಮಂದಹಾಸ. ಅದೇ ಹುಮ್ಮಸ್ಸಿನಲ್ಲಿ ಪ್ರಯೋಗದ ವಿವರಣೆ ನೀಡುತ್ತ ನಮ್ಮ ದೈನಂದಿನ ಬದುಕಿನಲ್ಲಿ ಪ್ರಯೋಗಶೀಲತೆಯನ್ನು ಹೇಳುತ್ತ ರಂಜಿಸುತ್ತಾನೆ.
ಇದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ತಾಲೂಕಿನ ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಕಂಡುಬಂದ ವಿವಿಧ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿನ ಒಂದು ಮಾದರಿ. ವ್ಯರ್ಥ ಬಿಸ್ಲೇರಿ ಬಾಟಲಿ ಬಳಸಿ ಮಳೆ ಕೊಯ್ಲು, ಸಿರಿಂಜು ರಬ್ಬರ್ ನಳಿಕೆ, ಮಣ್ಣು ಬಳಸಿ ರೂಪಿಸಿದ ಮೂತ್ರ ಜನಕಾಂಗ ಮಾದರಿ, ಇಲಾಸ್ಟಿಕ್ ರಬ್ಬರ, ಕಾಗದ, ದಾರ ಇನ್ನಿತರ ಕಚ್ಚಾ ಸಾಮಗ್ರಿ ಬಳಸಿ ತಯಾರಿಸಿದ ನಡೆದಾಡುವ ಸರಿಸೃಪ, ಸಲಾಯಿನ್ ಬಾಟಲಿ ನಳಿಕೆ, ಪ್ಲಾಸ್ಟಿಕ್ ಮುಚ್ಚಳ ಬಳಸಿ ರಚಿಸಿದ ಸ್ಟೆಥೋಸ್ಕೋಪ್, ತುಂಡು ತುಂಡು ಮ್ಯಾಗ್ನೆಟ್ ತಾಮ್ರದ ತಂತಿ ಬಳಸಿ ರೂಪಿಸಿದ ಮೋಟಾರ್, ಲಿಂಬು ಹಣ್ಣಿನಿಂದ ವಿದ್ಯುತ್, ರಟ್ಟು, ಪಿವಿಸಿ ಕೊಳವೆ ಕೃಷಿಯ ಕಚ್ಚಾ ಸಾಮಗ್ರಿ ಬಳಸಿ ತಯಾರಿಸಿದ ಕಾರ್ಖಾನೆಯ ವ್ಯರ್ಥ ಅನಿಲ ಶುದ್ಧೀಕರಣ, ಪೆಟ್ರೋಲಿಯಂ ಗ್ಯಾಸ್ ಒಲೆ, ಜ್ವಾಲಾಮುಖಿ ಮಾದರಿ, ಲಿಫ್ಟ್ ಮಾದರಿ, ಜಲಶಕ್ತಿಯ ರಾಕೆಟ್ ಮಾದರಿ ಹೀಗೆ ಒಂದಲ್ಲ, ಎರಡಲ್ಲ ಐವತ್ತಕ್ಕೂ ಹೆಚ್ಚು ವಿಜ್ಞಾನ ಮಾದರಿಗಳ ಅನಾವರಣ ನೋಡುಗರನ್ನು ರಂಜಿಸುವಂತಿದ್ದವು. ಪ್ರತಿಯೊಂದು ಮಾದರಿಯೂ ವಿಜ್ಞಾನದ ಒಂದೊಂದು ತತ್ವವನ್ನು ವಿವರಿಸುತ್ತಿದ್ದವು. ಪ್ರದರ್ಶನ ಉದ್ಘಾಟಿಸಿದ ವಿಜ್ಞಾನ ಲೇಖಕ ವೈ.ಬಿ. ಗುರಣ್ಣನವರ ರಾಮನ್ ಪರಿಣಾಮ ವಿವರಿಸಿದರು. ಮುಖ್ಯಾಧ್ಯಾಪಕ ಆರ್.ಎಸ್. ಪಾಟೀಲಅಧ್ಯಕ್ಷತೆ ವಹಿಸಿದ್ದರು. ಗೋಪಣ್ಣ ಕುಲಕರ್ಣಿ ಕೆ.ಆರ್. ತಳಗೇರಿ, ಎಸ್.ಎಂ. ಚಳಗೇರಿ ಉಪಸ್ಥಿತರಿದ್ದರು. ಎಂ.ಜಿ. ಹಿರೇಮಠ ಸ್ವಾಗತಿಸಿದರು. ಎನ್.ಎಂ. ಹಸರೆಡ್ಡಿ ವಂದಿಸಿದರು. ಗುರುರಾಜ ಭಂಡಾರಿ ನಿರ್ವಹಿಸಿದರು.
ವಿಜೇತರು: ಸುನೀಲ ತಳವಾರ, ಶಿವಕುಮಾರ ಕೌದಿ, ಪವನ ಹರನಟ್ಟಿ, ಅರ್ಜುನ ರಾಠೋಡ, ಕುಮಾರಸ್ವಾಮಿ ಹಿರೇಮಠ, ಅಕ್ಷಯ ಕೂಡಗಿ, ಶಿವಾನಂದ ರಾಮಣ್ಣನವರ, ವಿನಾಯಕ ಅಂಬ್ಲಿ ಬಹುಮಾನ ಪಡೆದರು.