ರಂಗಭೂಮಿಗೆ ಕುಮಾರ ಶ್ರೀ ಮಾದರಿ
ಹಾನಗಲ್ಲ: ರಂಗಭೂಮಿ ಹಾಗೂ ಸಾಂಸ್ಕೃತಿಕ ಅಭ್ಯುದಯದಲ್ಲಿ ಮಠಗಳ ಪಾತ್ರ ಪ್ರಮುಖವಾಗಿದ್ದು, ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಸಂಗೀತ, ಸಾಹಿತ್ಯದ ಬೆಳವಣಿಗೆ ಜೊತೆಗೆ ಸಮಾಜಮುಖಿ ಚಿಂತನೆ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರೇಮಾ ಬದಾಮಿ ಅಭಿಪ್ರಾಯಪಟ್ಟರು.
ಹಾನಗಲ್ಲಿನಲ್ಲಿ ನಡೆಯುತ್ತಿರುವ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳವರ 83ನೇ ಸ್ಮರಣೋತ್ಸವದಲ್ಲಿ ದತ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಶ್ಲೀಲ ಪ್ರದರ್ಶನ: ವಿಷಾದ
ರಂಗ ಪ್ರೋತ್ಸಾಹ ಆಂದೋಲನವಾಗಿ ರೂಪಿತವಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ರಂಗ ನಾಟಕಗಳಾದಿಯಾಗಿ, ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಅಶ್ಲೀಲ ಪ್ರದರ್ಶನಕ್ಕೆ ಅವಕಾಶ ಮಾಡಿರುವುದು ವಿಷಾದದ ಸಂಗತಿ. ಇದು ನಾಳಿನ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ. ಸಮಾಜ ಹಾಗೂ ಸರ್ಕಾರ ಇಂತಹ ಅಶ್ಲೀಲ ಪ್ರದರ್ಶನಗಳನ್ನು ಸ್ಥಗಿತಗೊಳಿಸಲು ಕ್ರಮ ಜರುಗಿಸಬೇಕೆಂದ ಅವರು, ಶ್ರೀಮಠ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವುದು ಸಂತಸದ ಸಂಗತಿ. ಮಹಿಳೆ ಕೇವಲ ಸೌಂದರ್ಯದ ವಸ್ತುವಾಗಿ ಉಳಿದರೆ ಸಾಲದು, ಪ್ರತಿಭೆ ಹೊರತರುವ ಅವಕಾಶ ಕಲ್ಪಿಸಿ. ಮಹಿಳಾ ಸಮುದಾಯವನ್ನು ಗೌರವಿಸವಂತಾಗಬೇಕೆಂದರು.
ಕಲೆಯಿಂದ ಬದುಕು ಹಸನು
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಮನುಷ್ಯನಿಗೆ ಪರೋಪಕಾರದ ಬದುಕು ಬೇಕು. ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಬದುಕನ್ನು ಹಸನುಗೊಳಿಸಿಕೊಳ್ಳಬೇಕು. ಚನ್ನಬಸವ ಶ್ರೀಗಳು ನೇತೃತ್ವ ವಹಿಸಿ ಮಾತನಾಡಿದರು. ಗುರುಸಿದ್ಧ ರಾಜಯೋಗೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸದಾಶಿವ ಶ್ರೀಗಳು, ದಳವಾಯಿ ಮಠದ ಶಿವಕುಮಾರ ಶ್ರೀಗಳು ಉಪಸ್ಥಿತರಿದ್ದರು. ಶಾಂತಕುಮಾರ ದೇವರು ಪ್ರವಚನ ನೀಡಿದರು.