ಪರಿಪೂರ್ಣ ಆರೋಗ್ಯಕ್ಕೆ ರಕ್ತದಾನ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.4
ರಕ್ತಕ್ಕೆ ಪರ್ಯಾಯ ರಕ್ತವೇ ಆಗಿದೆ. ವಿಶ್ವದ ಅತ್ಯಂತ ಅಚ್ಚರಿಯ ವಸ್ತುಗಳಲ್ಲಿ ಮೊದಲ ಸಾಲಿನ ನಿತ್ಯ ಕಾಣುವ ಬೆಲೆ ಅರಿಯದ ವಸ್ತುವೇ ರಕ್ತ. ವಿಶ್ವದಲ್ಲಿ ದಿನನಿತ್ಯ ಸಕಾಲಕ್ಕೆ ರಕ್ತ ದೊರೆಯದೇ ನೂರಾರು ಪ್ರಾಣಗಳ ಹರಣವಾಗುತ್ತಿದ್ದು, ಪರಿಪೂರ್ಣ ಆರೋಗ್ಯ ಪಡೆಯಲು ರಕ್ತದಾನ ಮಾಡುವಂತೆ ರಕ್ತ ಭಂಡಾರದ ಮುಖ್ಯಸ್ಥ ಡಾ ಮುರಳೀಧರ ಕರೆ ನೀಡಿದರು.
ಇಲ್ಲಿನ ಹುಕ್ಕೇರಿಮಠದ ಶಿವಲಿಂಗ ಶ್ರೀಗಳ 96ನೇ ಜಯಂತ್ಯೋತ್ಸವದ ಅಂಗವಾಗಿ ಶಿವಲಿಂಗೇಶ್ವರ ಮಹಿಳಾ ಕಾಲೇಜು, ಜೆಸಿ ಸಂಸ್ಥೆ, ಉದಯ ಯುವಕ ಮಂಡಳ ಹಾಗೂ ಇತರ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನದಿಂದ ರೋಗ ವಾಸಿ: ದೇಶದಲ್ಲಿ ಪ್ರತಿದಿನ ಸುಮಾರು 40ಜನ ಸಕಾಲಿಕ ರಕ್ತ ದೊರೆಯದೇ ಸಂಕಟದ ಸ್ಥಿತಿ ಎದುರಿಸುತ್ತಿದ್ದಾರೆ. ಪ್ರತಿ ಆರೋಗ್ಯವಂತ ವ್ಯಕ್ತಿ ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ.
ಕನಿಷ್ಠ 1 ಬಾರಿ ಮಾಡಿದಲ್ಲಿ ಅದು ಉತ್ತಮ ಆರೋಗ್ಯಕ್ಕೂ ಕಾರಣವಾಗಲಿದೆ. ರಕ್ತದಾನದಿಂದ ದೇಹದಲ್ಲಿನ ಕೊಬ್ಬಿನಾಂಶ, ಮಧುಮೇಹ, ರಕ್ತದೊತ್ತಡಗಳನ್ನು ಸಮರ್ಪಕವಾಗಿ ನಿರ್ವಹಿಸಬಹುದಲ್ಲದೇ ಅನಗತ್ಯ ದುಬಾರಿ ಅತಿಥಿಗಳಾದ ಸಕ್ಕರೆ ಕಾಯಿಲೆ, ಬಿಪಿ ಹಾಗೂ ಹೃದಯಾಘಾತಗಳಿಂದ ದೂರವಿರಲು ಸಾಧ್ಯವಿದೆ. ಪ್ರತಿ 18 ವರ್ಷ ಮೇಲ್ಪಟ್ಟ, 50 ವರ್ಷದೊಳಗಿನ ವ್ಯಕ್ತಿ ರಕ್ತದಾನ ಮಾಡಬಹುದಾಗಿದೆ ಎಂದರು.
ಶಿಬಿರದಿಂದ ಅರಿವು: ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಜಿಲ್ಲಾಸ್ಪತ್ರೆ ಶಸ್ತ್ರ ವೈದ್ಯಾಧಿಕಾರಿ ಡಾ. ಎಸ್.ಎನ್. ಮರೆಕ್ಕನವರ ಮಾತನಾಡಿ, ರಕ್ತದಾನ ಕುರಿತಂತೆ ಅಗತ್ಯ ಕಾಳಜಿ ಮೂಡಿಸುವ ಅಗತ್ಯ ಇಂದು ಹೆಚ್ಚಾಗಿದೆ. ಇಂಥ ಶಿಬಿರಗಳನ್ನು ಮೇಲಿಂದ ಮೇಲೆ ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ರಕ್ತದಾನ ಕುರಿತಂತೆ ಕಳಕಳಿ ಹಾಗೂ ಅರಿವು ಮೂಡಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭ ಸದಾಶಿವ ಶ್ರೀ, ಗುರುಸಿದ್ದೇಶ್ವರ ಶ್ರೀಗಳು, ಉದಯ ಯುವಕ ಮಂಡಳದ ಅಧ್ಯಕ್ಷ ಡಾ ಪ್ರದೀಪ ದೊಡ್ಡಗೌಡರ, ಜೆಸಿ ಅಧ್ಯಕ್ಷ ಪ್ರದೀಪ ಪಾಟೀಲ, ಪದಾಧಿಕಾರಿಗಳಾದ ಸಿದ್ದಣ್ಣ, ಪ್ರಕಾಶ ಲಂಬಿ, ಮಹಾಂತೇಶ, ಚಿದಾನಂದ ನಡುವಿನಮಠ, ಶಿವಲಿಂಗೇಶ ಬುಕನಟ್ಟಿ ಡಾ ಕೆಂಭಾವಿ, ಜಿಲ್ಲಾಸ್ಪತ್ರೆಯ ರಕ್ತ ಬಾಂಡಾರದ ಸಿಬ್ಬಂದಿ, ಶ್ರೀಮಠದ ಆಡಳಿತ ಮಂಡಳಿ ಸದಸ್ಯರು, ಕಾಲೇಜು ಸಿಬ್ಬಂದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು 28 ಜನರು ರಕ್ತದಾನ ಮಾಡಿದರು.