ಮಕ್ಕಳಿಗೆ ಹೆಚ್ಚಿನ ವಿಷಯ ತಿಳಿಸಬೇಕಿದೆ: ಶಿವಕುಮಾರ
ಶಿಗ್ಗಾಂವಿ: ಶಿಕ್ಷಕರು ನಿರಂತರ ವಿದ್ಯಾರ್ಥಿಗಳಿದ್ದಂತೆ ದಿನನಿತ್ಯ ನಡೆಯುವ ಘಟನೆಗಳು ದೇಶ, ವಿದೇಶದಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ನಿರಂತರವಾಗಿ ಮಾಧ್ಯಮಗಳಿಂದ ಅಭ್ಯಸಿಸುವುದರಿಂದ ಶಾಲೆಗಳಲ್ಲಿ ಮಕ್ಕಳಿಗೆ ವಿಷಯ ತಿಳಿಸಲು ಅನುಕೂಲವಾಗುತ್ತದೆ. ಬರೀ ಪಾಠಕ್ಕೆ ಸೀಮಿತವಾಗದೆ ಹೊರಗಡೆ ವಿಷಯವನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕಿದೆ ಎಂದು ಶಿಕ್ಷಕ ಟಿ. ಶಿವಕುಮಾರ ಹೇಳಿದರು. ತಾಲೂಕಿನ ಮೂಕಬಸರಿಕಟ್ಟೆಯಲ್ಲಿ ನಡೆದ ಬಾಡ ಕ್ಲಸ್ಟರ್ನ ಸಮಾಲೋಚನಾ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ಯುವಕರಲ್ಲಿ ಸಾಹಿತ್ಯ, ಭಾಷೆ, ಬರವಣಿಗೆಯ ಬಗ್ಗೆ ನಿರಾಸಕ್ತಿ ಮೂಡುತ್ತಿದೆ. ಬರಹ ಕ್ಷೇತ್ರದಲ್ಲಿ ಯುವಕರ ಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ಶಿಕ್ಷಕರು ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಸಾಹಿತ್ಯದ ಒಲವು ಮೂಡಿಸುವಂಥ ಕೆಲಸಕ್ಕೆ ಮುಂದಾಗಬೇಕೆಂದರು. ಸಮಾಲೋಚನಾ ಸಭೆಯಲ್ಲಿ ಟಿ. ಶಿವಕುಮಾರ ಬರೆದ ಪ್ರಕಟಿತ ಲೇಖನಗಳು ಮತ್ತು ವಿಶೇಷ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಮಾಲೋಚನಾ ಸಭೆಗೆ ಆಗಮಿಸಿದ ನೂರಾರು ಶಿಕ್ಷಕರ ಪ್ರದರ್ಶನವನ್ನು ನೋಡಿ ಸಂಭ್ರಮಿಸಿದರು. ಪ್ರದರ್ಶನವನ್ನು ಸಂಪನ್ಮೂಲ ವ್ಯಕ್ತಿ ಎಸ್.ಆರ್. ತುಪ್ಪದ ಉದ್ಘಾಟಿಸಿದರು. ಮುಖ್ಯೋಪಾದ್ಯಾಯ ಎಚ್.ಎಂ. ಬೋವಾಜಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಸ್.ಐ. ಕಾಳೆ, ಬಿ.ಡಿ. ಕಲ್ಯಾಣಮಠ, ಸಿ.ಎಸ್. ಇಂಗಳಕಿ, ಜಿ.ಯು. ಚವ್ಹಾಣ, ಎಸ್. ಶ್ವೇತಾ, ಕೆ.ಆರ್. ಬಸವರಾಜ, ಬಿ. ಮಂಜಪ್ಪ, ಪಿ. ಮಂಜುಳಾ, ಮಮತಾ ಶೀಲವಂತರ, ಶಿಕ್ಷಕರು ಭಾಗವಹಿಸಿದ್ದರು.
15ರಂದು ನೌಕಾಪಡೆ ಭರ್ತಿ ರ್ಯಾಲಿ
ಹಾವೇರಿ: ಭಾರತೀಯ ನೌಕಾ ಮತ್ತು ಸೇನಾ ಪಡೆಯ ಭರ್ತಿ ರ್ಯಾಲಿ ಮಾ. 15ರಂದು ಬೆಳಗ್ಗೆ 6ಗಂಟೆಗೆ ಕಾರವಾರದ ಕದಂಬ ನೌಕಾ ಬೇಸ್ನಲ್ಲಿ ಆಯೋಜಿಸಲಾಗಿದೆ. ಧಾರವಾಡ, ಗದಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಯ ಆಸಕ್ತ ಅವಿವಾಹಿತ ಯುವಕರು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು 1992ರ ಆಗಸ್ಟ್ 1ರಿಂದ 1996 ಜುಲೈ 31ರೊಳಗೆ ಜನಿಸಿರಬೇಕು ಹಾಗೂ ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರದೊಂದಿಗೆ ರಾಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸಾಯನ್ಸ್ ಯಾವುದಾದರೂ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ 50 ಕೆಜಿ ತೂಕ, 157 ಸೆಂ. ಮೀ ಎತ್ತರ ಹಾಗೂ 75 ಸೆಂ. ಮೀ ಎದೆ ಸುತ್ತಳತೆ ಹೊಂದಿರಬೇಕು. ರ್ಯಾಲಿಗೆ ಆಗಮಿಸುವಾಗ ಎಸ್ಸೆಸ್ಸೆಲ್ಸಿ ಹಾಗೂ ಇತರ ಉನ್ನತ ವಿದ್ಯಾರ್ಹತೆಯ ಅಂಕಪಟ್ಟಿ, 8 ಪಾಸ್ಪೋರ್ಟ್ ಅಳತೆ ಫೋಟೊಗಳು, ಸ್ವ-ವಿಳಾಸದ ರು. 10ಗಳ ಅಂಚೆ ಚೀಟಿ ಅಂಟಿಸಿದ 22್ಢ10 ಸೆ.ಮೀ ಅಳತೆಯ ಒಂದು ಲಕೋಟೆ, ಎನ್ಸಿಸಿ ಹಾಗೂ ಇನ್ನಿತರ ಪ್ರಮುಖ ಪ್ರಮಾಣ ಪತ್ರಗಳು, ರಹವಾಸಿ ಪ್ರಮಾಣ ಪತ್ರಗಳು ಈ ಎಲ್ಲಾ ದಾಖಲೆಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.