ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಯುವಕರಿಗೆ ಮಾರ್ಗದರ್ಶನ ಅಗತ್ಯ

Lingaraj Badiger
Updated On : 5 Mar 2013, 11:44 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 4
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾದ ಯುವಕರು ಕತ್ತಲೆ ಜಗತ್ತಿನ ಅಮಾನವೀಯ ಕೃತ್ಯಗಳಲ್ಲಿ ತೊಡಗಿದ್ದಾರೆ. ಯುವಶಕ್ತಿ ಸದ್ಬಳಕೆಯಾಗದೇ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ರಂಭಾಪುರಿ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕದಮನಹಳ್ಳಿ ಗ್ರಾಮದ 101 ಪತ್ರಿವನ ಹಿರೇಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದ
ಅಂಗವಾಗಿ ಶನಿವಾರ ಏರ್ಪಡಿಸಿದ್ದ ಜನಜಾಗೃತಿ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಣ್ಣದ ಜಗತ್ತಿನ ಪ್ರಭಾವಕ್ಕೆ ಒಳಗಾದ ಯುವ ಜನಾಂಗ ಅಗತ್ಯ ಮಾರ್ಗದರ್ಶನ ಕೊರತೆಯಿಂದಾಗಿ, ದಿಕ್ಕು ತಪ್ಪಿ ದಂತೆ ವರ್ತಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಧರ್ಮಪೀಠಗಳು ಜಾಗೃತಿ ಸಭೆಗಳನ್ನು ನಡೆಸುವ ಮೂಲಕ ಪರಿವರ್ತನೆಯ ಕಾರ್ಯದಲ್ಲಿ ತೊಡಗಿವೆ ಎಂದರು.
ಸಮಾಜ ಆರ್ಥಿಕವಾಗಿ ಸದೃಢವಾಗಿದ್ದರೂ ಸಹ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸಮಾಜ ಬೆಳೆದಂತೆ ಸತ್ಕಾರ್ಯಗಳು ಹಾಗೂ ಸಂಸ್ಕಾರಗಳು ದೂರವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಬುದ್ಧಿಜೀವಿಗಳು, ಧಾರ್ಮಿಕ ಕೇಂದ್ರಗಳು ಹಾಗೂ ಚಿಂತಕರು ಇವುಗಳನ್ನು ಹೋಗಲಾಡಿಸಲು ನಿರಂತರ ಪ್ರಯತ್ನಿಸಬೇಕಾಗಿದೆ ಎಂದರು.
ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸನಾತನ ಪರಂಪರೆಯಿಂದ ಧರ್ಮಗಳು ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿವೆ. ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹಿಳೆಯರು ಪಾತ್ರ ಬಹು ದೊಡ್ಡದು. ಆದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ನಾಶವಾಗುತ್ತಿದ್ದು, ಅದೇ ಮಹಿಳೆಯನ್ನು ಅವಮಾನಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಹೆಚ್ಚಾಗುತ್ತಿರುವ ಜಾತಿಗಳ ನಡುವಿನ ಸಂಘರ್ಷದಿಂದ ಧರ್ಮದ ಮೂಲ ತತ್ವಗಳು ಮರೆ ಮಾಚುತ್ತಿವೆ, ಸಮಾಜ ಪರಿವರ್ತನೆಯಾಗದೇ ಹೋದರೆ ಭವಿಷ್ಯದ ದಿನಗಳು ಕತ್ತಲೆಯಾಗಲಿದೆ, ದುಷ್ಟರಿಗೆ ಶಿಕ್ಷೆ ಶಿಷ್ಟರ ರಕ್ಷಣೆ ಮಾಡುವ ಮೂಲಕ ಪರಿವರ್ತನೆ ಅಗತ್ಯ ಎಂಬುದನ್ನು ಪ್ರತಿಪಾದಿಸಿದ ಅವರು, ಅವುಗಳಿಗೆ ಚೈತನ್ಯ ತುಂಬು ಕೆಲಸವನ್ನು ಧರ್ಮಪೀಠಗಳು ಮಾಡುತ್ತಿವೆ ಎಂದರು.
ಇದಕ್ಕೂ ಮುನ್ನ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಗ್ರಾಮದಲ್ಲಿ ನಡೆಯಿತು. ವಿವಿಧ ಕಲಾ ಮೇಳಗಳ ನೃತ್ಯ ವೈಭವ ಹಾಗೂ ನೂರಾರು ಮಹಿಳೆಯರ ಪೂರ್ಣಕುಂಭ ಸ್ವಾಗತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರ ಮನಸ್ಸನ್ನು ಸೆಳೆಯಿತು.
ಪಶುಪತಿ ಶಿವಾನಂದ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಾವೇರಿ ಬಣ್ಣದಮಠದಶ್ರೀಗಳು, ಕೂಡಲದ ಗುರುನಂಜೇಶ್ವರ ಶ್ರೀಗಳು, ಸಾಲೂರು ಹಿರೇಮಠದ ಶ್ರೀಗಳು, ಹನುಮನಹಳ್ಳಿ ಹಾಲಸಿದ್ಧರಾಮ ಶ್ರೀ, ಮಾಜಿ ಶಾಸಕ ಸುರೇಶಗೌಡ, ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನ, ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ, ಜಿ.ಪಂ. ಅಧ್ಯಕ್ಷ ಶಂಕ್ರಪ್ಪ ಮಾತನವರ, ರವೀಂದ್ರ ಪಟ್ಟಣಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುರೇಶ ಯತ್ನಳ್ಳಿ ಯಲ್ಲನಗೌಡ ಪಾಟೀಲ ಉಪಸ್ಥಿತರಿದ್ದರು. ರುದ್ರಮನಿಸ್ವಾಮಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement