ಸಂಭ್ರಮದ ಕಾಂತೇಶಸ್ವಾಮಿ ರಥೋತ್ಸವ
ಬ್ಯಾಡಗಿ: ಸುಕ್ಷೇತ್ರ ಕದರಮಂಡಲಗಿ ಕಾಂತೇಶಸ್ವಾಮಿ ದೇವರ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ಸೋಮವಾರ ಗ್ರಾಮದಲ್ಲಿ ನೆರವೇರಿತು.
ಕಾಂತೇಶ ದೇವಸ್ಥಾನದ ಮುಖ್ಯದ್ವಾರದಿಂದ ಪ್ರಾರಂಭವಾದ ಸರ್ವಾಲಂಕೃತ ರಥೋತ್ಸವವು ಭಕ್ತ ಜನಸಾಗರದ ಹರ್ಷೋದ್ಘಾರ ಮಧ್ಯೆ ತಿಮ್ಮಪ್ಪನ ದೇವಸ್ಥಾನದವರೆಗೆ ಸಾಗಿ ಮತ್ತೆ ಮೂಲ ಸ್ಥಾನಕ್ಕೆ ಬಂದು ತಲುಪಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸುಡು ಬಿಸಿಲು ಲೆಕ್ಕಿಸದೇ ರಥ ಕಳಸಕ್ಕೆ ಬಾಳೆಹಣ್ಣು ಹಾಗೂ ಉತ್ತುತ್ತಿ ಎಸೆದು ಭಕ್ತಿಸೇವೆ ಸಮರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಭಕ್ತ ಸಾಗರ: ಆಂಜನೇಯ ಸ್ವಾಮಿಯ ಶ್ರೀಕ್ಷೇತ್ರವೆಂದು ಪ್ರಖ್ಯಾತಿ ಹೊಂದಿರುವ ಕದರಮಂಡಲಗಿ ಶ್ರೀಕಾಂತೇಶನ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವುದು ವಿಶೇಷ. ಪ್ರತಿವರ್ಷದಂತೆ ಈ ಸಲವೂ ಭಕ್ತರು ಸಾಗರೋಪಾದಿಯಲ್ಲಿ ಶ್ರೀಕಾಂತೇಶನ ದರ್ಶನ ಪಡೆದು ಪುನೀತರಾದರು. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಕಾಂತೇಶನ ಜಾತ್ರೆಗೆ ಲಕ್ಷಾನುಗಟ್ಟಲೇ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಸಹಜವಾಗಿ ವಾಹನಗಳ ದಟ್ಟಣೆಯು ಹೆಚ್ಚಾಗಿತ್ತು. ರಾಣಿಬೆನ್ನೂರು ಹಾಗೂ ಬ್ಯಾಡಗಿ ಪಟ್ಟಣಗಳಿಂದ ಸಾರಿಗೆ ಸೌಕರ್ಯ ಕಲ್ಪಿಸಲಾಗಿತ್ತು. ರಥೋತ್ಸವ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಪಿಎಸ್ಐ ಬಸವರಾಜ ಕಲ್ಲಮ್ಮನವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.