ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುಧಾರಣೆಗೆ ಪಕ್ಷ ಸಂಘಟಿಸಿ

Lingaraj Badiger
Updated On : 5 Mar 2013, 11:35 am

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 4
ದೇಶ ಹಾಗೂ ಅದರ ವ್ಯವಸ್ಥೆ ಮುಂದೆ ಯಾವುದೇ ವ್ಯಕ್ತಿ ಬಲಶಾಲಿ ಅಥವಾ ಮುಖ್ಯವಲ್ಲ. ಹಾಗೆಂದು ತಿಳಿಸಿಕೊಂಡಲ್ಲಿ ಅದು ಮೂರ್ಖತನ. ಇದನ್ನು ಎಲ್ಲರೂ ತಿಳಿದುಕೊಂಡು ಪಕ್ಷ ಸಂಘಟನೆ ಹಾಗೂ ವ್ಯವಸ್ಥೆ ಸುಧಾರಣೆಗೆ ಶ್ರಮಿಸುವಂತೆ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕರೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಹಾವೇರಿಗೆ ಸೋಮವಾರ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಮೈಲಾರ ಮಹಾದೇವಪ್ಪ ಸರ್ಕಲ್‌ನಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಬಿಜೆಪಿ ಆಡಳಿತ ಇದ್ದರೂ ಅದು ಕೆಲವರ ಕೈಗೊಂಬೆಯಾಗಿ ಕಾರ್ಯನಿರ್ವಹಿಸಿದ್ದು ಎಲ್ಲರಿಗೂ ತಿಳಿದಿದೆ. ಪ್ರಸಕ್ತ ಸಾಲಿನಲ್ಲಿ ಹಾಗಾಗದೆ ಶುದ್ಧ ಬಿಜೆಪಿ ಆಡಳಿತವಾಗಲಿದೆ. ಅಭಿವೃದ್ಧಿ ಪರವಾದ ಬಿಜೆಪಿ ಆಡಳಿತವನ್ನು ಈಗಾಗಲೇ ರಾಜ್ಯಾದ್ಯಂತ ಜನತೆ ಮೆಚ್ಚಿಕೊಂಡಿದ್ದು, ಬಿಜೆಪಿ ಬೆಂಬಲಿಸಲು ಉತ್ಸುಕರಾಗಿದ್ದಾರೆ. ಅಭಿವೃದ್ಧಿ ಪರ ಚಿಂತನೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅತಿ ಹೆಚ್ಚಿನ ಅನುದಾನ ನೀಡಿದ್ದು ಬಿಜೆಪಿ ಸರ್ಕಾರ ಎಂದರು.
ಕಟುಕರಾಗಲು ಸಿದ್ಧ: ಬರುವ ದಿನಗಳಲ್ಲಿ ಚುನಾಯಿತ ಅಭ್ಯರ್ಥಿಗಳಿಂದ ರಾಜಿನಾಮೆ ಪತ್ರವನ್ನು ಮುಂಚಿತವಾಗಿಯೇ ಬರೆಸಿಕೊಂಡು ನಂತರ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಹಿಂದಿನಂತೆ ಮತ್ತೆ ಬಿಜೆಪಿಯಲ್ಲಿ ತಪ್ಪುಗಳಾಗಲಾರವು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅನಿವಾರ್ಯ. ಅದಕ್ಕಾಗಿ ನಾವು ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಟುಕರಾಗಲೂ ಸಿದ್ಧ ಎಂದರು.
ಕೆಲವರಿಂದ ಪಕ್ಷಕ್ಕೆ ಕಪ್ಪು ಚುಕ್ಕೆ: ಪಕ್ಷ ಹಾಗೂ ಸಮಾಜ ಗೌರವ ಕಾಪಾಡುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಹಿಂದೆ ಇದ್ದ ಅನೇಕ ಹರಾಮಖೋರರಿಂದಾಗಿ ಪಕ್ಷಕ್ಕೆ ಕೊಂಚ ಕಪ್ಪು ಚುಕ್ಕೆ ಮೆತ್ತಿಕೊಂಡಿತ್ತು. ಈಗ ತೊಳೆದುಕೊಂಡು ಪರಿಶುದ್ಧರಾಗಿದ್ದೇವೆ. ಅವರಂತೆ ನೀವಾಗದೆ ಸಮಾಜಮುಖಿ ಚಿಂತನೆ, ಅಭಿವೃದ್ಧಿ ಪರ ನಿಲುವು ತಳೆಯುವಂತೆ ಕರೆ ನೀಡಿದರು.
ಪ್ರಮಾಣ: ಅಭ್ಯರ್ಥಿಗಳನ್ನು ಸಾರ್ವಜನಿಕವಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಕಾರಣವಾಗಿರುವುದು ಸಾಮಾಜಿಕ ಜೀವನದ ಬದ್ಧತೆ ಹೊಂದಲಿ ಎಂಬುದು. ಅದಕ್ಕಾಗಿ ಸಾರ್ವಜನಿಕರ ಮುಂದೆಯೇ ಪ್ರಮಾಣ ಮಾಡಿಸಲಾಗುತ್ತಿದೆ, ರಾಜಕಾರಣಿಗಳು ತಪ್ಪು ಮಾಡಿದಲ್ಲಿ ಜನರೆ ಉತ್ತರಿಸಬೇಕಿದೆ. ಕಾರಣ ಜಾಗೃತಿಯಿಂದ ನಿಷ್ಪಕ್ಷಪಾತ, ಸ್ವಾರ್ಥರಹಿತವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗುವಂತೆ ಕರೆ ನೀಡಿದರು. ಈ ಸಂದರ್ಭ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಂದ್ರ ಕಟಕೋಳ, ಶಿವಲಿಂಗಪ್ಪ ಕಲ್ಯಾಣಿ, ಸಿದ್ದರಾಜ ಕಲಕೋಟಿ, ಪ್ರಭು ಹಿಟ್ನಳ್ಳಿ ಇತರರು ಪಾಲ್ಗೊಂಡಿದ್ದರು.

ಕೆಜೆಪಿ ಬೆಳೆಯುತ್ತಿದೆ: ಸಜ್ಜನರ
ಹಾವೇರಿ: ಕರ್ನಾಟಕ ಜನತಾ ಪಕ್ಷಕ್ಕೆ ಜನ ಬೆಂಬಲ ಸಿಗುತ್ತಿದೆ. ಯಡಿಯೂರಪ್ಪನವರ ಸಾಧನೆಗಳನ್ನು ನೋಡಿ ಜನತೆ ಮತ ನೀಡುತ್ತಾರೆ. ಪಕ್ಷ ಜಿಲ್ಲೆಯಲ್ಲಿ ತನ್ನ ಪಾರುಪತ್ಯ ಮೆರೆಯಲಿದೆ ಎಂದು ವಿಪ ಸದಸ್ಯ ಶಿವರಾಜ ಸಜ್ಜನರ ಹೇಳಿದರು. ನಗರದ 20ನೇ ವಾರ್ಡ್ ಕೆಜೆಪಿ ಅಭ್ಯರ್ಥಿ ಲಲಿತಾ ಹುಲಿಕಟ್ಟಿ ಪರ ಪ್ರಚಾರ ಕೈಗೊಂಡು ಮಾತನಾಡಿದರು. ವಿವಿಧ ಓಣಿಗಳಲ್ಲಿ ಸಂಚರಿಸಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದರು. ಬಸವರಾಜ ಬೆಳವಡಿ, ಚನ್ನವೀರ ಸ್ವಾಮಿ, ಬಾಪುಗೌಡ ಪಾಟೀಲ, ಬಸವರಾಜ ನವಲಗುಂದ ಉಪಸ್ಥಿತರಿದ್ದರು.
ಬಹಿರಂಗ ಪ್ರಚಾರ ಅಂತ್ಯ: ಸೂಚನೆ
ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾ. 7ರಂದು ಜರುಗಲಿದ್ದು, ಅದಕ್ಕೂ 48 ಗಂಟೆ ಮೊದಲೇ ಬಹಿರಂಗ ಪ್ರಚಾರ ಸಭೆ, ಸಮಾರಂಭ, ಮೆರವಣಿಗೆ, ಟಿವಿ, ಮುದ್ರಣ, ದೃಶ್ಯ ಶ್ರವಣ ಮಾಧ್ಯಮಗಳಲ್ಲಿ ಪ್ರಚಾರ ನಿಷೇಧಿಸಲಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿಲ್ಲದ ಮತದಾರರು ಪ್ರಚಾರ ಕಾರ್ಯದಲ್ಲಿ ತೊಡಗದಂತೆ ಚುನಾವಣೆ ಆಯೋಗ ಸೂಚಿಸಿದೆ. ಅಭ್ಯರ್ಥಿಗಳ ಕೈಪಿಡಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು ಮಾ. 5ರಂದು ಬೆಳಗ್ಗೆ 7ರೊಳಗೆ ವಾರ್ಡ್‌ನಿಂದ ನಿರ್ಗಮಿಸಬೇಕು. ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕರಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಜಿ. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement