ಮಾಧ್ಯಮ ಸ್ಪರ್ಧೆ: ಹಾವೇರಿ ಸ್ನಾತಕೋತ್ತರ ಕೇಂದ್ರ ದ್ವಿತೀಯ
ಹಾವೇರಿ: ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಸಮಾಜ ಮತ್ತು ಮಾಧ್ಯಮ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಮಾಧ್ಯಮ ಸ್ಪರ್ಧೆಯಲ್ಲಿ ಕವಿವಿ ಹಾವೇರಿ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಿಕೆ ಪುಟವಿನ್ಯಾಸ, ಕೋಲಾಜ್, ಟಿವಿ ಸುದ್ದಿ ಬಿತ್ತರಣೆ, ವರದಿಗಾರಿಕೆ, ನುಡಿಚಿತ್ರ ಬರವಣಿಗೆ, ಮ್ಯಾಡ್ ಆಡ್ ಸ್ಪರ್ಧೆಗಳಲ್ಲಿ ನವೀನ ಪರದೇಶಿ, ಪಾಟೀಲ ಜಿಬಿಸಿ, ರಾಜು ಹಿರೇಮಠ, ಕರಿಯಪ್ಪ ಅರಳಿಕಟ್ಟಿ, ಸುರೇಖಾ ಪಾಟೀಲ, ಶರಣು ಚಿಲಝೇರಿ, ಪರಸಪ್ಪ ಹಳ್ಳಳ್ಳಿ, ಪವನ ದೇಶಪಾಂಡೆ, ಪ್ರಮೋದ ಹರಿಕಾಂತ, ಬಾಬುಗೌಡ ರೂಡಗಿ ಮತ್ತು ಪವಿತ್ರಾ ಮೂಲಿಮನಿ ಭಾಗವಹಿಸಿದ್ದರು. ಪುಟ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಮೋದ ಹರಿಕಾಂತ ಹಾಗೂ ಶರಣು ಚಿಲಝರಿ ಪ್ರಥಮ, ಪೀಸ್ ಟು ಕ್ಯಾಮೆರಾ ಸ್ಪರ್ಧೆಯಲ್ಲಿ ಪವನ ದೇಶಪಾಂಡೆ ದ್ವಿತೀಯ ಸ್ಥಾನ ಪಡೆದಿದ್ದು, ಕೋಲಾಜ್, ಮ್ಯಾಡ್ ಆಡ್, ಟಿವಿ ಸುದ್ದಿ ಬಿತ್ತರಣೆ, ವರದಿಗಾರಿಕೆ ಹಾಗೂ ನುಡಿಚಿತ್ರ ವಿಭಾಗದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಭಾಗದ ಉಪನ್ಯಾಸಕ ವೀರೇಶ ಹಿರೇಮಠ ಮಂಡಿಸಿದ 'ಒಪಿನಿಯನ್ ಪೋಲ್ ಆನ್ ಟಿವಿ ಕಂಟೆಂಟ್ ಅಮಂಗ್ ಪ್ರೊಫೆಶನಲ್ಸ್ ಇನ್ ಧಾರವಾಡ ಸಿಟಿ' ಸಂಶೋಧನಾ ಪ್ರಬಂಧ ರಾಷ್ಟ್ರೀಯ ಮಟ್ಟದ ಪುಸ್ತಕವೊಂದರಲ್ಲಿ ಪ್ರಕಟಣೆಗೆ ಅರ್ಹತೆಯ ಗೌರವ ಪಡೆದಿದೆ. ವಿದ್ಯಾರ್ಥಿಗಳು, ಉಪನ್ಯಾಸಕ ವೀರೇಶ ಹಿರೇಮಠ ಅವರನ್ನು ಕೇಂದ್ರದ ಆಡಳಿತಾಧಿಕಾರಿ ಡಾ ಟಿ.ಎಂ. ಭಾಸ್ಕರ, ವಿಭಾಗದ ಪ್ರಾಧ್ಯಾಪಕರಾದ ಎಸ್.ಎಸ್. ಆದೋನಿ, ನಿಖಿಲ್ ಕುಲಕರ್ಣಿ ಅಭಿನಂದಿಸಿದ್ದಾರೆ.