94 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಬ್ಯಾಡಗಿ: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಮಾ. 7ರಂದು ನಡೆಯಲಿರುವ ಪುರಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಮಸ್ಟರಿಂಗ್ ಕಾರ್ಯಕ್ಕೆ ಚಾಲನೆ ದೊರೆಯಿತು. ಚುನಾವಣಾ ಸಿಬ್ಬಂದಿ ಎಲೆಕ್ಟ್ರಾನಿಕ್ ಮತಯಂತ್ರ ಹಾಗೂ ಮತಪತ್ರಗಳೊಂದಿಗೆ ತಮ್ಮ ನಿಯೋಜಿತ ಮತಗಟ್ಟೆಗಳಿಗೆ ವಾಹನಗಳಲ್ಲಿ ತೆರಳಿದರು.
24 ಮತಗಟ್ಟೆ: ಪುರಸಭೆಯ 23 ವಾರ್ಡ್‌ಗಳ ಪೈಕಿ 24 ಮತಗಟ್ಟೆ ರಚಿಸಲಾಗಿದ್ದು, ಅದರಲ್ಲಿ 14 ಸಾಮಾನ್ಯ, 6 ಸೂಕ್ಷ್ಮ ಹಾಗೂ 4 ಅತೀಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸುರಕ್ಷಿತವಾಗಿ ಮತಗಟ್ಟೆಗಳಿಗೆ ತೆರಳಿರುವ ಅಧಿಕಾರಿಗಳು ಮತದಾನಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
94 ಅಭ್ಯರ್ಥಿಗಳ ಭವಿಷ್ಯ: 53 ಪುರುಷರು ಹಾಗೂ 41ಮಹಿಳೆಯರು ಒಟ್ಟು 94 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 9,714 ಪುರುಷ, 9,655 ಮಹಿಳೆಯರು ಸೇರಿ ಒಟ್ಟು 19,369 ಮತದಾರರು ತಮ್ಮ ಸಂವಿಧಾನ ಬದ್ಧ ಹಕ್ಕು ಚಲಾಯಿಸುವ ಮೂಲಕ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಅತಿ ಕಡಿಮೆ ಮತದಾರರು: ಕೇವಲ 550 ಮತದಾರರಿರುವ ವಾ.ನಂ. 21 ಅತೀ ಕಡಿಮೆ ಮತದಾರರಿದ್ದು, 1,802 ಮತದಾರರನ್ನು ಹೊಂದಿರುವ ವಾರ್ಡ್ 18 ಅತೀ ಹೆಚ್ಚು ಮತದಾರರಿರುವ ಕ್ಷೇತ್ರವಾಗಿದೆ. ಉಳಿದಂತೆ ವಾರ್ಡ್ 1ರಲ್ಲಿ 824, ವಾರ್ಡ್ 2ರಲ್ಲಿ-830, 3-806, 4-1022, 5-806, 6-827, 7-795, 8-812, 9-623, 10-564, 11-709, 12-644, 13-779, 14-677, 15-745, 16-1135, 17-641, 19-594, 20-928, 22-1095 ಹಾಗೂ ವಾರ್ಡ್ 23ರಲ್ಲಿ-1,161 ಮತದಾರರಿದ್ದಾರೆ.
ನೂರಕ್ಕೂ ಹೆಚ್ಚು ಸಿಬ್ಬಂದಿ: ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಇಬ್ಬರು ಸಹಾಯಕರು ಸೇರಿ ಪ್ರತಿ ಮತಗಟ್ಟೆಗೆ ನಾಲ್ವರು ಸಿಬ್ಬಂದಿಯಂತೆ ಒಟ್ಟು 94 ಅಧಿಕಾರಿಗಳು ಹಾಗೂ 10 ಜನ ಸೆಗ್ಮೆಂಟ್ ಅಧಿಕಾರಿಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಚುನಾವಣಾ ಸಿಬ್ಬಂದಿ ಮುಖ್ಯಸ್ಥ ಜಯಣ್ಣ ತಳವಾರ ಪತ್ರಿಕೆಗೆ ಮಾಹಿತಿ ನೀಡಿದರು.
ಸೂಕ್ತ ಬಂದೋಬಸ್ತ್: ಶಾಂತಿಯುತ ಮತದಾನಕ್ಕಾಗಿ ಸಿಪಿಐ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಲಾಗಿದ್ದು, ಮತಗಟ್ಟೆಗಳಿಗೆ ಬಂದೋಬಸ್ತ್ ಒದಗಿಸಲಾಗಿದೆ. 3 ಪಿಎಸ್‌ಐ, 4 ಎಎಸ್‌ಐ, 11 ಹೆಡ್ ಕಾನ್ಸ್‌ಟೆಬಲ್ಸ್, 35 ಪೊಲೀಸರು, 4 ಮಹಿಳಾ ಪೊಲೀಸರು ಸೇರಿ ಒಟ್ಟು 78 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಒಂದು ತುಕಡಿ ನಿಯೋಜಿಸಿರುವುದಾಗಿ ಪೊಲೀಸ್ ನೋಡೆಲ್ ಅಧಿಕಾರಿ ಸಿಪಿಐ ಚಿಕ್ಕರೆಡ್ಡಿ ಮಾಹಿತಿ ನೀಡಿದರು.