ಚುನಾವಣೆ: ಸರ್ಕಾರಿ ಕಚೇರಿ, ಶಾಲಾ-ಕಾಲೇಜಿಗೆ ರಜೆ
ಹಾವೇರಿ: ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಮಾ. 7ರಂದು ಚುನಾವಣೆ ನಡೆಯಲಿದ್ದು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ(ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ.
ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕುಗಳು, ಇತರೆ ಬ್ಯಾಂಕುಗಳು, ಜೀವವಿಮಾ ನಿಗಮ ಮುಂತಾದ ಕಚೇರಿಗಳಿಗೆ ಸೀಮಿತಗೊಳಿಸಿ ಸರ್ಕಾರವು ಸಾರ್ವಜನಿಕ ರಜೆ ಘೋಷಿಸಿದೆ. ಬಿಸಿನೆಸ್ ಟ್ರೇಡ್, ಇಂಡಸ್ಟ್ರೀಯಲ್ ಅಂಡರ್ಟೇಕಿಂಗ್ ಇನ್ನಿತರ ಎಸ್ಟಾಬ್ಲಿಷ್ಮೆಂಟ್ಗಳಲ್ಲಿ, ದಿನಗೂಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮತದಾನ ದಿನದಂದು ವೇತನ ಸಹಿತ ರಜೆಗೆ ಅರ್ಹರಿರುತ್ತಾರೆ.
--
ಪಪಂ ಚುನಾವಣೆ ಸಿದ್ಧತೆ
ಹಿರೇಕೆರೂರು: ಪಪಂಯ 16 ವಾರ್ಡ್ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲ ಮತಗಟ್ಟೆಗಳಲ್ಲಿ ಸಿಬ್ಬಂದಿ ಸಲಕರಣೆಗಳೊಂದಿಗೆ ಬೀಡು ಬಿಟ್ಟಿದ್ದಾರೆ. ಒಟ್ಟು 16 ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಪೈಕಿ 2 ಸೂಕ್ಷ್ಮ, 2 ಅತಿಸೂಕ್ಷ್ಮ ಹಾಗೂ 12 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಂದು ಮತಗಟ್ಟೆಗೆ 4 ಸಿಬ್ಬಂದಿ ಇದ್ದು, ಒಬ್ಬರು ಗ್ರೇಡ್ 1 ಅಧಿಕಾರಿ ಹಾಗೂ ಓರ್ವ ಸಿಪಾಯಿ ನೇಮಿಸಲಾಗಿದೆ. ಒಟ್ಟಾರೆ 96 ಸಿಬ್ಬಂದಿ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಚುನಾವಣೆಯಲ್ಲಿ 5,964 ಪುರುಷರು, 5,295 ಮಹಿಳೆಯರು ಹಾಗೂ ಹೊಸದಾಗಿ ಸೇರ್ಪಡೆಯಾದ 524 ಜನ ಸೇರಿ ಒಟ್ಟಾರೆ 11,783 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮಾ. 11ರಂದು ಬೆಳಗ್ಗೆ 7 ಗಂಟೆಯಿಂದ ತಹಸೀಲ್ದಾರ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಹಸೀಲ್ದಾರ ತುಷಾರ ಹೊಸೂರ ತಿಳಿಸಿದ್ದಾರೆ.