ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಾಂತಿ-ಸುವ್ಯವಸ್ಥಿತ ಚುನಾವಣೆಗೆ ಸನ್ನದ್ಧ

Lingaraj Badiger
Updated On : 7 Mar 2013, 11:25 am

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 6
ಜಿಲ್ಲಾದ್ಯಂತ ಇರುವ 8 ಸ್ಥಳೀಯ ಸಂಸ್ಥೆಗಳಿಗೆ ಮಾ. 7ರಂದು ಮತದಾನ ನಡೆಯಲಿದ್ದು, ಈ ಕುರಿತಂತೆ ಅಗತ್ಯ ನಿಬ್ಬಂದಿ ನಿಯೋಜನೆಯೊಂದಿಗೆ ಶಾಂತ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಪ್ರಭಾರಿ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದರು.
ಈ ಕುರಿತು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2 ನಗರಸಭೆ, 5 ಪುರಸಭೆ ಹಾಗೂ 1 ಪಟ್ಟಣ ಪಂಚಾಯಿತಿಗೆ ಗುರುವಾರ ಚುನಾವಣೆ ಜರುಗಲಿದೆ.
ಈಗಾಗಲೇ ಅಗತ್ಯ ನಿಬ್ಬಂದಿಗಳ ನಿಯೋಜನೆ ಕಾರ್ಯ ಪೂರ್ಣಗೊಂಡಿದ್ದು, ಸಿಬ್ಬಂದಿ ಈಗಾಗಲೇ ಮಸ್ಟರಿಂಗ್ ಕೇಂದ್ರಗಳಿಗೆ ತೆರಳುತ್ತಿದ್ದಾರೆ ಎಂದರು. ಜಿಲ್ಲೆಯ 193 ವಾರ್ಡುಗಳಲ್ಲಿ 1ಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿರುವುದರಿಂದ 192 ವಾರ್ಡುಗಳಿಗೆ ಚುನಾವಣೆ ಜರುಗಲಿದೆ ಎಂದರು.
ಮತಗಟ್ಟೆ, ಚುನಾವಣಾಧಿಕಾರಿ: ಒಟ್ಟು 257 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 63 ಸೂಕ್ಷ್ಮ, 51 ಅತಿಸೂಕ್ಷ್ಮ ಹಾಗೂ 142ನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ. ಪ್ರತಿ ನಗರಸಭೆಗೆ ತಲಾ ನಾಲ್ವರು ಚುನಾವಣಾಧಿಕಾರಿಗಳು ಹಾಗೂ ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸಿದರೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗೆ ತಲಾ ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 20 ಚುನಾವಣಾಧಿಕಾರಿ ಹಾಗೂ 20 ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಮಸ್ಟರಿಂಗ್ ಕೇಂದ್ರದಲ್ಲಿ ಮತ ಎಣಿಕೆ: ಜಿಲ್ಲೆಯಲ್ಲಿನ ಒಟ್ಟು 192 ವಾರ್ಡುಗಳಿಗೆ 894 ಅಭ್ಯರ್ಥಿಗಳ ಭವಿಷ್ಯವನ್ನು ಒಟ್ಟು 2,08,616 ಮತದಾರರು ಗುರುವಾರ ನಿರ್ಧರಿಸಲಿದ್ದಾರೆ. ಮತ ಎಣಿಕೆ ಪ್ರತಿ ತಾಲೂಕು ಮಸ್ಟರಿಂಗ್ ಕೇಂದ್ರಗಳಾದ ತಹಸೀಲ್ದಾರ್ ಕಚೇರಿಗಳಲ್ಲಿ ಮಾ. 11ರಂದು ಜರುಗಲಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 257 ಮತಗಟ್ಟೆಗಳಿಗೆ ತಲಾ ಒಂದೊಂದರಂತೆ ಒಟ್ಟು 257 ವಿದ್ಯುನ್ಮಾನ ಮತಯಂತ್ರಗಳನ್ನು ಈಗಾಗಲೇ ವಿತರಿಸಲಾಗಿದೆ.
ತಾಂತ್ರಿಕ ವ್ಯವಸ್ಥಾಪಕರ ನೇಮಕ: ಪ್ರತಿ ಚುನಾವಣಾಧಿಕಾರಿಗೆ ಒಂದರಂತೆ ಹೆಚ್ಚುವರಿಯಾಗಿ ಒಂದೊಂದು ವಿದ್ಯುನ್ಯಾನ ಯಂತ್ರಗಳನ್ನು ನೀಡಲಾಗಿದೆ. ಯಾವುದೇ ಮತಯಂತ್ರಗಳು ತೊಂದರೆಗೀಡಾದಲ್ಲಿ ಇವುಗಳನ್ನು ಅಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಅಲ್ಲದೆ ಹಾವೇರಿ ಹಾಗೂ ಸವಣೂರು ಉಪ ವಿಭಾಗಗಳಲ್ಲಿ ಒಬ್ಬೊಬ್ಬ ತಾಂತ್ರಿಕ ವ್ಯವಸ್ಥಾಪಕರನ್ನು ನೆಲೆಗೊಳಿಸಿದ್ದು, ತೀವ್ರ ತೊಂದರೆ ಇದ್ದಲ್ಲಿ ಅವರು ತುರ್ತಾಗಿ ಧಾವಿಸಿ ಸರಿಪಡಿಸಲಿದ್ದಾರೆ. ಒಟ್ಟಾರೆಯಾಗಿ ಈ ಚುನಾವಣಾ ಪ್ರಕ್ರಿಯೆಗೆ 1152 ಸಿಬ್ಬಂದಿ ನಿಯೋಜಿಸಲಾಗಿದ್ದು, ಇದರಲ್ಲಿ ಪೊಲೀಸ್ ಸಿಬ್ಬಂದಿ ಸೇರಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಕ್ರಮ ಸಾಗಾಟ- ನೋಟಿಸ್: ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದಾಗಲೂ ಮತದಾರರಿಗೆ ಆಮಿಷ ತೋರಿದ ಘಟನೆಗೆ ಸಂಬಂಧಿಸಿದಂತೆ ಹಾವೇರಿಯಲ್ಲಿ 200 ಟಿಶರ್ಟ್, ರಾಣಿಬೆನ್ನೂರಿನಲ್ಲಿ 10 ಬಾಕ್ಸ್ ಮದ್ಯ, 432 ಸೀರೆ, 4 ವಾಹನಗಳು, ಹಿರೇಕೆರೂರಿನಲ್ಲಿ 50 ಸ್ಟೀಲ್ ಕ್ಯಾನ್‌ಗಳು ಸೇರಿದಂತೆ ಒಟ್ಟು ರು. 17.25 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 53 ಜನರಿಗೆ ನೋಟಿಸ್ ನೀಡಲಾಗಿದ್ದು, ಅದರಲ್ಲಿ 19ಕ್ಕೆ ಸಕಾರಣದ ಉತ್ತರಗಳು ಬಂದಿವೆ. ಇತರೆ ಪ್ರಕರಣಕ್ಕೆ ಉತ್ತರ ನಿರೀಕ್ಷಿಸಲಾಗುತ್ತಿದೆ. ಇಲ್ಲದಿದ್ದಲ್ಲಿ ಅವರ ಮೇಲೆ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement