ಸವಣೂರು ಪುರಸಭೆ: ಯಾರಿಗೆ ಅಧಿ'ಖಾರ'?
ಕನ್ನಡಪ್ರಭ ವಾರ್ತೆ, ಸವಣೂರು, ಮಾ. 6
ತಮ್ಮ ಪಕ್ಷ ನಿಷ್ಠೆ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇರುವ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮೂರನೇ ಬಾರಿಗೆ ಕಾಂಗ್ರೆಸ್ ಟಿಕೆಟ್ ಪಡೆಯುವ ಹವಣಿಕೆಯಲ್ಲಿರುವ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಅವರಿಗೆ ಪ್ರಸಕ್ತ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.
ಇತ್ತಿಚಿನ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಶೇ. 100ರಷ್ಟು ಸಾಧನೆ ತೋರಿದ್ದ ಬಿಜೆಪಿ ಪ್ರಸಕ್ತ ಚುನಾವಣೆಯಲ್ಲೂ ತನ್ನ ಗೆಲುವಿನ ಸರಣಿ ಮುಂದುವರಿಸಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಅಭ್ಯಾಸ ಪಂದ್ಯದಂತೆ ಕ್ಷೇತ್ರದಲ್ಲಿ ಈಗ ಕಿರುಸಮರ ಏರ್ಪಟ್ಟಿದೆ.
ಪಕ್ಷಾಂತರ, ಬಂಡಾಯ, ಜಾತಿ ಲೆಕ್ಕಾಚಾರಗಳೂ ಹರಿದಾಡಿದವು. ಪುರಸಭೆ ಕಣದಲ್ಲಿರುವ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿಗಿಂತ, ಮೊದಲ ಹಂತದ ನಾಯಕರ ಬಲಾಬಲದ ಪ್ರಶ್ನೆ ಎದುರಾಗಿದೆ. ಕ್ಷೇತ್ರದಲ್ಲಿ ಬಿರುಗಾಳಿಯಂತೆ ಬೀಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೆಜೆಪಿ ಗುಪ್ತಗಾಮಿನಿಯಾಗಿದೆ.
ಮೂವರೇ ಇದ್ದರೂ ಅಧಿಕಾರಕ್ಕೆ: 23 ಸದಸ್ಯ ಬಲದ ಸವಣೂರು ಪುರಸಭೆಯಲ್ಲಿ ಕಳೆದ ಬಾರಿ ಕೇವಲ ಮೂರು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರ ಹಿಡಿದಿತ್ತು. ಈ ಬಾರಿಯೂ ಗದ್ದುಗೆ ಏರುವ ವಿಶ್ವಾಸದಲ್ಲಿದೆ. 16 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಹವಣಿಕೆಯಲ್ಲಿದೆ.
ಒಬ್ಬ ಸದಸ್ಯನನ್ನು ಹೊಂದಿದ್ದ ಸಮಾಜವಾದಿ ಪಕ್ಷ ಈ ಬಾರಿ ತಟಸ್ಥವಾಗಿದೆ. ಇಬ್ಬರು ಸದಸ್ಯ ಬಲವಿದ್ದ ಜೆಡಿಎಸ್ ಹೋರಾಟ ಮುಂದುವರಿಸಿದೆ. ಓರ್ವ ಪಕ್ಷೇತರನ ಸ್ಥಾನ ಈ ಬಾರಿ ಯಾರ ಪಾಲಾಗುತ್ತದೆ ಎಂಬ ಕುತೂಹಲವೂ ಮೂಡಿದೆ.
ನಾಮಪತ್ರ ಸಲ್ಲಿಕೆಯ ಗೊಂದಲದಿಂದ ಚುನಾವಣೆ ಪೂರ್ವದಲ್ಲಿಯೇ ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದೆ. ಉಳಿದ 22 ವಾರ್ಡಗಳಲ್ಲಿ ಅಳಿವು-ಉಳಿವಿನ ಹೋರಾಟಕ್ಕೆ ಮುಂದಾಗಿದೆ.
ಎಲ್ಲ 23 ವಾರ್ಡಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿದಿದೆ. ಜೆಡಿಎಸ್ 15 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. 12 ಪಕ್ಷೇತರರು, ಬಿಎಸ್ಸಾರ್ ಕಾಂಗ್ರೆಸ್ನ 11 ಅಭ್ಯರ್ಥಿಗಳೂ ಚುನಾವಣೆ ಎದುರಿಸುತ್ತಿದ್ದಾರೆ.
ಕಾಂಗ್ರೆಸ್-ಬಿಜೆಪಿ ನೇರ ಸ್ಪರ್ಧೆ: ಗರಿಷ್ಠ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿಗೂ ಅವಕಾಶ ನೀಡಿರುವ ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಿದೆ. ಅಲ್ಲದೆ ಅಂಜುಮನ್ ಸಂಸ್ಥೆಯ ಮುಖಂಡನೋರ್ವ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದು ಕಾತರ ಹೆಚ್ಚಿಸಿದೆ.
ಕಳೆದ ಸಾಲಿನಲ್ಲಿ ಬಹುಮತ ಪಡೆದೂ ಅಧಿಕಾರ ವಂಚಿತ ಕಾಂಗ್ರೆಸ್ ಈ ಬಾರಿ ಹೆಚ್ಚಿನ ಜಾಗ್ರತೆ ವಹಿಸಿದೆ. ಕ್ಷೇತ್ರದ ಅಭಿವೃದ್ಧಿಯ ಮಾನದಂಡ ಬಿಜೆಪಿಗೆ ಆಧಾರವಾಗಲಿದೆ. ಹಿಂದುಳಿದ ವಾರ್ಡ್ಗಳಲ್ಲಿ ಕಾಂಗ್ರೆಸ್ ಬಗ್ಗೆಯೂ ಒಲವಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ನೇರ ಸಮರದ ತೀವ್ರತೆ, ಬರಗಾಲದ ಬಿರು ಬಿಸಿಲನ್ನೂ ಮೀರಿಸಿದೆ.
ಕೊರಗು: ಕಳೆದ ಸಾಲಿನಲ್ಲಿ ಪುರಸಭೆಗೆ ಲಭ್ಯವಾದ ಅನುದಾನ, ಹೊಸಬರಲ್ಲಿ ಹಲವಾರು ಕನಸುಗಳನ್ನು ಬಿತ್ತಿದೆ. ಅನುದಾನ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆಯಾಗಿಲ್ಲ ಎಂಬ ಕೊರಗೂ ಸವಣೂರಿನ ನಿವಾಸಿಗಳಲ್ಲಿದೆ.
ಅಧಿಕಾರಕ್ಕೆ ಹವಣಿಕೆ: ನಗರದ ಅಭಿವೃದ್ಧಿಯ ಆಶಯಕ್ಕಿಂತಲೂ ಭವಿಷ್ಯದ ರಾಜಕೀಯ ಲೆಕ್ಕಾಚಾರ ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಮಾಜಿ ಸದಸ್ಯರು, ಅವರ ಸಂಬಂಧಿಕರು ಕಣದಲ್ಲಿ ಉಳಿಯುವ ಮೂಲಕ ಪುನಃ ಅಧಿಕಾರವನ್ನು ಪಡೆಯುವ ಹವಣಿಕೆಯಲ್ಲಿದ್ದಾರೆ. ಕಳೆದ ಅವಧಿಯಲ್ಲಿ ಅನಧಿಕೃತವಾಗಿ ಪಕ್ಷಾಂತರ ಮಾಡಿದ್ದ ಹಲವಾರು ಸದಸ್ಯರು ಎರಡೂ ಪಕ್ಷಗಳಿಂದ ಟಿಕೆಟ್ ವಂಚಿತರಾಗಿದ್ದಾರೆ.
2001ರ ಜನಗಣತಿ ಪ್ರಕಾರ 35,563 ಜನಸಂಖ್ಯೆ ಇದ್ದು, 18,333 ಪುರುಷರು ಮತ್ತು 17,230 ಸ್ತ್ರೀಯರಿದ್ದಾರೆ. ಒಟ್ಟು ಮತದಾರರ ಸಂಖ್ಯೆ 23,775. ಇದರಲ್ಲಿ 12,673 ಪುರುಷ ಮತ್ತು 11,102 ಮಹಿಳಾ ಮತದಾರರು ತಮ್ಮ ಅಧಿಕಾರ ಚಲಾಯಿಸಲಿದ್ದಾರೆ.