25 ಹೆಸರು ಸೇರ್ಪಡೆ: ಮಾತಿನ ಚಕಮಕಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ.7
ಹಾನಗಲ್ಲ ಪುರಸಭೆ ಚುನಾವಣೆಯ 4ನೇ ವಾರ್ಡಿನ ಮತದಾರರ ಪಟ್ಟಿಯಲ್ಲಿ ಕೂಡಲ ಗ್ರಾಮದ ಸುಮಾರು 25 ಜನರ ಹೆಸರು ಸೇರ್ಪಡೆಯಾಗಿವೆ ಎಂದು ಆರೋಪಿಸಿ, ಅವರಿಗೆ ಮತದಾನಕ್ಕೆ ಅವಕಾಶ ಕೊಡಕೂಡದೆಂದು ಒಂದು ಗುಂಪು ಪ್ರತಿಪಾದಿಸಿದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು.
ತಾಲೂಕಿನ ಕೂಡಲ ಗ್ರಾಮದವರೆನ್ನಲಾದ ಸುಮಾರು 25 ಜನರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರಿಂದ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದಾಗ ಈ ಘಟನೆ ಜರುಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ನಡುವೆ ಕೆಜೆಪಿಗೆ ಸೇರಿದವರೆನ್ನಲಾದ ಮತದಾರರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಗದ್ದಲವುಂಟಾಯಿತು. ಆ ಮತದಾರರ ಬಳಿ ಹಾನಗಲ್ಲ ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳು ಇದ್ದಲ್ಲಿ ಮಾತ್ರ ಮತದಾನಕ್ಕೆ ಅವಕಾಶ ನೀಡಬೇಕೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಪಟ್ಟು ಹಿಡಿದರು. ಆದರೆ, ಅವರ ಬಳಿ ಚುನಾವಣಾ ಆಯೋಗ ನಿರ್ದೇಶಿಸಿದ ದಾಖಲೆಗಳಲ್ಲಿರುವ ಕಾರಣ ಅವಕಾಶ ನೀಡಲೇ ಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರುವುದರಿಂದ ಅವರು ಮತ ಹಾಕಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದಕ್ಕೊಪ್ಪದ ಅಭ್ಯರ್ಥಿಗಳು ಆಕ್ಷೇಪಿತ ಮತಗಳೆಂದು(ಚಾಲೆಂಜ್ ಓಟ್ಸ್) ಪರಿಗಣಿಸಬೇಕೆಂದು ಹಣ ತುಂಬಿ ಅರ್ಜಿ ಸಲ್ಲಿಸಿ ಮತದಾನಕ್ಕೆ ಅವಕಾಶ ನೀಡಿದರು. ಈ ಮತದಾರರ ಪಟ್ಟಿಯಲ್ಲಿ 25 ಜನರ ಹೆಸರು, ವಿಳಾಸ ಮಾತ್ರವಿದ್ದು, ಭಾವಚಿತ್ರ ಇರದಿರುವುದು ಗೊಂದಲಕ್ಕೆ ಪುಷ್ಟಿ ನೀಡಿತು. ಆದಾಗ್ಯೂ ಚುನಾವಣಾ ಅಧಿಕಾರಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಚರ್ಚೆಯ ಫಲವಾಗಿ ಗೊಂದಲಕ್ಕೆ ತೆರೆ ಬಿದ್ದಿತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.