ಜಿಲ್ಲಾದ್ಯಂತ ಶೇ. 74.13ರಷ್ಟು ಮತದಾನ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.7
ಸ್ಥಳೀಯ ಸಂಸ್ಥೆಗಳ ಚುನಾವಣೆ ಗುರುವಾರ ಪೂರ್ಣಗೊಂಡಿದ್ದು, ಜಿಲ್ಲೆಯ ಒಟ್ಟು ಮತದಾನ 74.13 ಆಗಿದ್ದು, ಶೇ. 81.36ರೊಂದಿಗೆ ಬ್ಯಾಡಗಿ ಹೆಚ್ಚು ಮತದಾನ ಮಾಡಿದ ಕೀರ್ತಿಗೆ ಭಾಜವಾದರೆ, ಶೇ. 70.73ರಷ್ಟು ರಾಣಿಬೆನ್ನೂರಲ್ಲಿ ಕಡಿಮೆ ಮತದಾನವಾಗಿದೆ.
ಹಾವೇರಿಯಲ್ಲಿ ಮತದಾರರ ಹೆಸರುಗಳು ವಾರ್ಡ್ನಿಂದ ವಾರ್ಡಗೆ ಬದಲಾಗಿರುವುದು ತೀವ್ರ ಗೊಂದಲಕ್ಕೆ ಕಾರಣವಾಯಿತಾದರೂ ಪ್ರಸಕ್ತ ಸಾಲಿನಲ್ಲಿ ಯಾವ ವಾರ್ಡಿನಲ್ಲಿ ಮತದಾನಕ್ಕೆ ಅವಕಾಶವಿದೆಯೋ ಅಲ್ಲಿ ಮತದಾನ ಮಾಡಿ ತದನಂತರ ಇದನ್ನು ಸರಿಪಡಿಸಿಕೊಡುವುದಾಗಿ ಮತದಾರರ ಪಟ್ಟಿ ತಯಾರಿಸಿದ ಅಧಿಕಾರಿಗಳು ನೀಡಿದ ಭರವಸೆಗೆ ಬಹುತೇಕ ನಾಗರಿಕರು ತಮ್ಮ ಓಟಿಂಗ್ ಬಂದತ್ತ ದಾಪುಗಾಲಿರಿಸಿದ್ದು ಕಂಡುಬಂತು.
ಈ ಕುರಿತಂತೆ ಕಾರ್ತಿಕ ಹೂಗಾರ ಮಾತನಾಡಿ, ನಾವು ವಾಸವಾಗಿರುವುದು 19ನೇ ವಾರ್ಡಿನ ದ್ಯಾಮವ್ವನ ಗುಡಿ ಓಣಿಯಲ್ಲಿ ಆದರೆ, ಪ್ರಸಕ್ತ ಸಾಲಿನಲ್ಲಿ ನನ್ನ ಓಟಿಂಗ್ ನಾಗೇಂದ್ರನಮಟ್ಟಿಯಲ್ಲಿ 14ನೇ ವಾರ್ಡಿಗೆ ಬಂದಿದೆ. ನನಗೆ ಪರಿಚಯವೇ ಇಲ್ಲದ ವ್ಯಕ್ತಿಗೆ ಹೇಗೆ ಓಟು ಹಾಕುವುದು ಯಾವ ವ್ಯಕ್ತಿ ಹೇಗೆ ಎಂಬುದೇ ಗೊತ್ತಿಲ್ಲದೇ ಕೇವಲ ಹಕ್ಕು ಸಾಧಿಸಬೇಕು ಎಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ.
ಹಾವೇರಿ: ಹಾವೇರಿಯ ವಾರ್ಡ್ 25ರಲ್ಲಿ ಮತದಾನ ಸಂದರ್ಭ ಓರ್ವನೇ ವ್ಯಕ್ತಿ ಎರಡನೇ ಬಾರಿಗೆ ಮತ ಚಲಾಯಿಸುತ್ತಿದ್ದಾನೆ ಎಂಬ ಗುಮಾನಿ ಕೊಂಚ ಗೊಂದಲ ಸೃಷ್ಟಿಸಿತ್ತು. ಅಲ್ಲದೇ ಮತದಾನ ಆರಂಭಕ್ಕೂ ಮುನ್ನವೇ ಮತ ಚಲಾವಣೆ ಮಾಡಲಾಗುತ್ತಿದೆ ಎಂಬ ಊಹಾಪೋಹಕ್ಕೆ ರೆಕ್ಕೆ ಮೂಡಿ ಅದು ಮತದಾರರಲ್ಲಿ ಹಾಗೂ ಅಭ್ಯರ್ಥಿಗಳಲ್ಲಿ ಕೊಂಚ ಗೊಂದಲ ಮೂಡಿಸಿತ್ತು. ತದನಂತರ ಅಲ್ಲಿನ ಕೆಲ ಹಿರಿಯರು ಬಂದು ಆದ ವ್ಯತ್ಯಾಸ ಗಮನಿಸಿ ಯಾವುದೇ ತೊಂದರೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಮತದಾನ ಸರಾಗ ಅನುವು ಮಾಡಿಕೊಟ್ಟರು.
ಹಿರೇಕೆರೂರು: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾದ ಹಾಗೂ ವಾರ್ಡಿನಿಂದ ವಾರ್ಡ್ಗೆ ಹೆಸರುಗಳು ಅದಲು ಬದಲಾದ ಕುರಿತಂತೆ ಮತದಾನದಂದೇ ಎಚ್ಚೆತ್ತ ನಾಗರಿಕರು ಕೆಲವು ಜನ ತಮ್ಮ ಹೆಸರುಗಳು ನಾಪತ್ತೆಯಾದ ಕುರಿತು ಹಾಗೂ ಅದಲು ಬದಲಾದ ಕುರಿತಂತೆ ಕೊಂಚ ಏರುಧ್ವನಿ ಪ್ರದರ್ಶಿಸಿದರಾದರೂ ಅದು ಕೆಲಸಕ್ಕೆ ಬಾರದೇ ಹೆಸರಿಲ್ಲದವರು ನಿರಾಶರಾಗಿ ಮನೆಯತ್ತ ಹೆಜ್ಜೆ ಹಾಕಿದರೆ ಅದಲು ಬದಲಾದ ನಾಗರಿಕರು ಗೊಣಗುತ್ತಲೇ ಮತಗಟ್ಟೆಗಳತ್ತ ಧಾವಿಸಿ ಮತ ಚಲಾಯಿಸಲು ಧಾವಂತ ತೋರಿದರು.
ಇತರೆಡೆ: ಜಿಲ್ಲೆಯ ರಾಣಿಬೆನ್ನೂರು, ಶಿಗ್ಗಾಂವಿ, ಹಾನಗಲ್ಲ, ಸವಣೂರು ಹಾಗೂ ಬಂಕಾಪುರದಲ್ಲಿ ಯಾವುದೇ ಗೊಂದಲಗಳಿಲ್ಲದೇ ಶಾಂತಿಯುತ ಮತದಾನ ಜರುಗಿ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಯಿತು.
ಈ ಕುರಿತಂತೆ ರಾಣಿಬೆನ್ನೂರಿನಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮತದಾನದ ಪ್ರಮಾಣ ಕೊಂಚ ಕಡಿಮೆ ಎಂಬುದು ಸ್ಪಷ್ಟವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.