ಮತಯಂತ್ರ ದೋಷ: ಮತದಾನ ಸ್ಥಗಿತ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ.7
ಮತಯಂತ್ರದಲ್ಲಿ (ಬ್ಯಾಲೆಟ್ ಯೂನಿಟ್) ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಮತದಾನ ಸ್ಥಗಿತಗೊಂಡ ಘಟನೆ ಬೂತ್ 17ರಲ್ಲಿ ನಡೆಯಿತು.
ನಿಗದಿತ ಸಮಯ ಬೆಳಗ್ಗೆ 7ಕ್ಕೆ ಮತದಾನ ಆರಂಭವಾಯಿತು, 8 ಗಂಟೆ ಹೊತ್ತಿಗೆ ಸುಮಾರು 30 ಮತದಾರರು ಮತ ಚಲಾಯಿಸಿದ್ದರು. ಆದರೆ, 31ನೇ ಮತ ಚಲಾವಣೆ ಸಂದರ್ಭ ಮತಯಂತ್ರದಲ್ಲಿ ಇದ್ದಕ್ಕಿದ್ದಂತೆ ದೋಷ ಕಂಡುಬಂದು ಮತದಾನ ಪೂರ್ಣಗೊಳ್ಳಲಿಲ್ಲ. ಮತದಾನ ಸ್ಥಗಿತಗೊಳಿಸಿದ ಮತಗಟ್ಟೆ ಅಧಿಕಾರಿ ಚುನಾವಣಾಧಿಕಾರಿಗಳ ಗಮನಕ್ಕೆ ತಂದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಪ ವಿಭಾಗಾಧಿಕಾರಿ ಚನ್ನಬಸಪ್ಪ, ತಹಸೀಲ್ದಾರ್ ಎ.ಎ. ಗನಿ, ಚುನಾವಣಾಧಿಕಾರಿಗಳಾದ ಪ್ರಸನ್ನಕುಮಾರ ಹಾಗೂ ನಟರಾಜ್, ಮಾಸ್ಟರ್ ಟ್ರೇನರ್ ನೀರಲಗಿ ಕೂಡಲೇ ದೋಷಪೂರಿತ ಮತಯಂತ್ರ ಸರಿಪಡಿಸುವಲ್ಲಿ ಯಶಸ್ವಿಯಾದರು. ಬಳಿಕ ಮತದಾನ ಕಾರ್ಯ ನಿರಾತಂಕವಾಗಿ ಸಾಗಿತು.
ಹೆಚ್ಚುವರಿ ಸಮಯ ಕೊಡಿ: ವಿಳಂಬವಾದ ಅರ್ಧ ಗಂಟೆ ಸಮಯವನ್ನು ಹೆಚ್ಚುವರಿಯಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸುವಂತೆ ಅಭ್ಯರ್ಥಿಗಳಾದ ದುರ್ಗೇಶ್ ಗೋಣೆಮ್ಮನವರ, ಸುರೇಶ್ ಅಸಾದಿ, ಸೋಮಣ್ಣ ಮಾಳಗಿ ಮನವಿ ಮಾಡಿದರು. ಆದರೆ, ಹೆಚ್ಚುವರಿ ಸಮಯಕ್ಕೆ ನಿರಾಕರಿಸಿದ ಉಪ ವಿಭಾಗಾಧಿಕಾರಿ ಚನ್ನಬಸಪ್ಪ ನಿಗದಿಯಂತೆ 5 ಗಂಟೆಗೆ ಮತದಾನ ಸಮಯ ಪೂರ್ಣಗೊಳಿಸುವುದಾಗಿ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.