ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಹಿಳೆಗೆ ಶಿಕ್ಷಣ, ಸಮಾನ ಅವಕಾಶವಿರಲಿ

Parashurama
Updated On : 10 Mar 2013, 12:30 pm

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ. 9
ಮಹಿಳಾ ದೌರ್ಜನ್ಯಕ್ಕೆ ತಡೆ ಹಾಕಿ, ಶಿಕ್ಷಣ ಹಾಗೂ ಸಮಾನ ಅವಕಾಶಗಳ ಮೂಲಕ ಮಹಿಳೆಯನ್ನು ಗೌರವಿಸುವ ವ್ಯವಸ್ಥೆ ಇಂದು ಅತ್ಯಗತ್ಯ ಎಂದು ಹುಬ್ಬಳ್ಳಿ ಚಿನ್ಮಯಿ ಚೇತನ ಕಾಲೇಜಿನ ಪ್ರಾಚಾರ್ಯೆ ಡಾ. ಸರಳಾ ಹೊಂಬಾಳಿ ಪ್ರತಿಪಾದಿಸಿದರು.
ಹಾನಗಲ್ಲಿನ ಸರಸ್ವತಿ ಮಹಿಳಾ ಮಂಡಳ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಡು-ಹೆಣ್ಣಿನ ನಡುವಿನ ತಾರತಮ್ಯ ಕೊನೆಗೊಂಡು, ಸ್ತ್ರೀ ಭ್ರೂಣ ಹತ್ಯೆಯಂತಹ ಸಾಮಾಜಿಕ ವಿಕಾರಗಳು ದೂರವಾಗಬೇಕು. ಮಹಿಳೆಗೆ ರಾಜಕೀಯ ಅವಕಾಶಗಳನ್ನು ನೀಡಿದಲ್ಲಿ ಸಮಾನತೆಗೆ ಒತ್ತು ನೀಡಿದಂತಾಗುತ್ತದೆ ಎಂದರು.
ಕಾಡಶೆಟ್ಟಿಹಳ್ಳಿ ಪ್ರೌಢಶಾಲೆ ಶಿಕ್ಷಕಿ ಲತಾ ಸದಾರಾಧ್ಯಮಠ ಮಾತನಾಡಿ, ಮಹಿಳಾ ಸಬಲತೆಗೆ ಸಾಮಾಜಿಕ ಬದ್ಧತೆ ಅಗತ್ಯ. ಮಹಿಳೆಯನ್ನು ಗೌರವಿಸದವರಿಗೆ ಒಂದು ಪ್ರತ್ಯೇಕ ನರಕವೇ ಇದೆ ಎಂಬ ಅರಿವಾಗಬೇಕಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಅಪವಾದದಿಂದ ಮಹಿಳೆ ಹೊರಬರಬೇಕಿದೆ. ಮಹಿಳೆಯ ಅಸುರಕ್ಷತೆ, ಹೊಟ್ಟೆಕಿಚ್ಚು ಭಾವನೆ ತೊಲಗಿ, ಸಾಮಾಜಿಕ ಉನ್ನತಿಯ ವಿಷಯದ ಹೋರಾಟಗಳಲ್ಲಿ ಸ್ತ್ರೀ ಅಸಮರ್ಥಳಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ವಿಜಯಲಕ್ಷ್ಮೀ ಗುಡಗುಡಿ ಮಾತನಾಡಿ, ಮಹಿಳೆಯ ಶೋಷಣೆಗೆ ಮುಕ್ತಿ ನೀಡುವ ಸಾಮಾಜಿಕ ಜಾಗೃತಿ ಇಂದಿನ ಅಗತ್ಯ. ಮಹಿಳೆ ಅಬಲೆಯಲ್ಲ, ಪೂಜ್ಯಳು. ಆದರೆ ಸಮಾನತೆ ಬೇಕಿದೆ ಎಂದರು.
ಉಪನ್ಯಾಸ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ ಖ್ಯಾಡಿ, ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ನಡೆದಿರುವ ಈ ದಿನಗಳಲ್ಲಿಯೂ, ದುಡ್ಡಿಗಾಗಿ ಅಂಗಾಂಗ ಪ್ರದರ್ಶನ ಹಾಗೂ ಜಾಹೀರಾತು ನೀಡುವ ಪ್ರವೃತ್ತಿಯಿಂದ ಮಹಿಳೆ ಹೊರಬರಬೇಕಾಗಿದೆ. ಮೌಲ್ಯಗಳನ್ನು ಉಳಿಸುವ ಮಹಿಳೆಯೇ ಇಂಥ ದಾರಿ ಹಿಡಿದರೆ ಮಕ್ಕಳ ಬದುಕನ್ನು ಹೇಗೆ ರೂಪಿಸಬಲ್ಲಳು. ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯ ನಡುವೆಯೂ ಮಹಿಳೆ ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಕೃಷಿಯಲ್ಲಿಯೂ ಅವಳ ಸಾಧನೆ ಕಡಿಮೆಯೇನಲ್ಲ ಎಂದರು. ಸರಸ್ವತಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಅನಿತಾ ಶಿವೂರ ಪಾಲ್ಗೊಂಡಿದ್ದರು. ಸ್ನೇಹಾ ಮಹಿಳಾ ಮಂಡಳದ ಅಧ್ಯಕ್ಷೆ ಮಧುಮತಿ ಪೂಜಾರ ಪಾಲ್ಗೊಂಡಿದ್ದರು. ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಲೀಲಾ ಗುಡಿ, ಅಕ್ಕಮಹಾದೇವಿ ಸುಗಾವಿ ಮಾತನಾಡಿದರು.
ಡಾ. ವಿಜಯಾ ಕುಲಕರ್ಣಿ ಸ್ವಾಗತಿಸಿದರು. ಸುಜಾತಾ ನಂದೀಶೆಟ್ಟರ ಪರಿಚಯಿಸಿದರು. ಅಕ್ಕಮ್ಮ ಕುಂಬಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 ಶಾರದಾ ಉದಾಸಿ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪಾ ಬಸ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments