ಸಭೆಗೆ ಗೈರು: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸದಸ್ಯರು
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.13
ತಹಸೀಲ್ದಾರ್, ಆಹಾರ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ತಾಪಂ ಸಾಮಾನ್ಯ ಸಭೆಗೆ ಗೈರು ಹಾಜರಾದರೆ ತಾಪಂ ಸದಸ್ಯರ ಸಭೆಗೆ ಏನು ಅರ್ಥವಿದೆ. ಚರ್ಚಿಸಲೇಬೇಕಾದ ಇಲಾಖೆಗಳ ಅಧಿಕಾರಿಗಳೆ ನಮಗೆ ಉತ್ತರಿಸದೇ ಹೋದಲ್ಲಿ ಸಭೆಯ ಅಗತ್ಯವಾದರೂ ಏನೆಂದು ಪ್ರಶ್ನಿಸಿದ ತಾಪಂ ಸದಸ್ಯರು ಸಭೆಯಿಂದ ಹೊರ ನಡೆದು ಅಧಿಕಾರಿಗಳು ಬರುವವರೆಗೂ ತಾಪಂ ಸಭೆ ನಡೆಸದಂತೆ ತಾಕೀತು ಮಾಡಿದ ಘಟನೆ ಇಲ್ಲಿನ ತಾಪಂ ಸಭಾಭವನದಲ್ಲಿ ಬುಧವಾರ ಜರುಗಿತು.
ಇಲ್ಲಿನ ತಾಪಂ ಸಭಾಭವನದಲ್ಲಿ ಬುಧವಾರ ಕರೆಯಲಾಗಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಹಲವಾರು ಸದಸ್ಯರು ತಾಪಂ ಸಭೆಗೆ ತಹಸೀಲ್ದಾರರೇ ಇಲ್ಲ. ಅವರು ಬರುವವರೆಗೂ ಕಾಯೋಣ ಎನ್ನುವ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳಿಗೆ ಚಾಟಿ ಬೀಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ಬಾರಿಯೂ ಸಭೆಗೆ ಗೈರು ಉಳಿಯುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ತಾಪಂ ಸದಸ್ಯರು, ಅಧಿಕಾರಿಗಳು ಸಭೆಗೆ ಬಾರದ ಹೊರತು ತಾವು ಸಭೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದು ಸುಮಾರು ಮೂರು ಗಂಟೆಗಳ ಕಾಲ ಸಭೆ ಬಹಿಷ್ಕರಿಸಿ ಸಭಾಭವನದ ಎದುರೇ ಅಧಿಕಾರಿಗಳಿಗಾಗಿ ಕಾಯ್ದು ನಿಂತರು. ಈ ಕುರಿತಂತೆ ತಾಪಂ ಸದಸ್ಯ ತಿಪ್ಪಣ್ಣ ಮಾತನಾಡಿ, ಕಳೆದ 2-3 ಸಭೆಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಗೈರು ಉಳಿದಿದ್ದಾರೆ. ಅಲ್ಲದೇ ಇಂದು ತಹಸೀಲ್ದಾರರೇ ಇಲ್ಲ. ಅಧಿಕಾರಿಗಳೆ ಇಲ್ಲದಿದ್ದರೇ ಸಭೆ ನಡೆಸಿ ಪ್ರಯೋಜನವೇನು ಜನರ ಸಮಸ್ಯೆ ಹೊತ್ತು ಬರುವ ನಮಗೆ ಉತ್ತರಿಸುವವರಾರು ಸಮಸ್ಯೆ ಬಗೆಹರಿಯುವುದೆಂತು ಸಭೆಗೆ ಅಧಿಕಾರಿಗಳನ್ನು ಕರೆಸುವಂತೆ ಪಟ್ಟು ಹಿಡಿದರಲ್ಲದೇ ಅಧಿಕಾರಿಗಳು ಬರುವವರೆಗೂ ನಾವೂ ಸಹ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಭಾಭವನದ ಬಾಗಿಲಿಗೆ ನಿಂತರು.
ಇಕ್ಕೆ ಬೆಂಬಲಿಸಿದ ಡಾ.ವಿ.ಎಸ್.ಮರೆಗಬ್ಬಿನ, ಪರಮೇಶಪ್ಪ ಕುರುವತ್ತಿಗೌಡರ, ಶ್ರೀನಿಧಿ ದೇಶಪಾಂಡೆ ಸೇರಿದಂತೆ ಏಳೆಂಟು ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಬಸಪ್ಪ ಕಳಸೂರ, ತಾಪಂ ಇಓ ಬಸವರಾಜಪ್ಪ ಅವರು ಅಧಿಕಾರಿಗಳನ್ನು ಸಭೆಗೆ ಕರೆಸುವ ಭರವಸೆ ನೀಡಿದರೂ ಸಹ ಸದಸ್ಯರು ವಾಪಸ್ಸು ಬಾರದೇ ಅಧಿಕಾರಿಗಳು ಬಂದ ನಂತರವೇ ಸಭೆಗೆ ಬರುವುದಾಗಿ ತಿಳಿಸಿದರಲ್ಲದೇ, ನಾವಿಲ್ಲದೇ ಸಭೆಯನ್ನು ನೀವಷ್ಟೇ ನಡೆಸುವುದಾದರೇ ನಡೆಸಿಕೊಳ್ಳಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸದಸ್ಯ ಚನ್ನಬಸಪ್ಪ ಅರಳಿ, ಉಪಾಧ್ಯಕ್ಷ ಕಳಸೂರ ಸಭೆಯಿಂದ ಹೊರ ಬಂದ ಸದಸ್ಯರನ್ನು ಸಮಾಧಾನಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ.
ಎರಡೂವರೆ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಇಂಥ ಸಭೆಗೂ ಅಧಿಕಾರಿಗಳು ಬಾರದಿದ್ದರೆ ಹೇಗೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳೇ ಇಲ್ಲದೇ ನಾವು ಯಾರಿಗೆ ಸಮಸ್ಯೆಯನ್ನು ಹೇಳಬೇಕು. ಕಳೆದ ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು. ನಾವು ಜನರಿಗೆ ಏನೆಂದು ಉತ್ತರ ಹೇಳಬೇಕು ಎಂದು ಪ್ರಶ್ನಿಸಿದರು.
ಅಲ್ಲದೇ ತಾಪಂ ಇಓ, ಸಭೆಗೆ ಹಾಜರಾಗದ ಯಾವ ಅಧಿಕಾರಿಗಳ ಮೇಲೆಯೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಇದುವರೆಗೂ ಒಂದೇ ಒಂದು ನೋಟಿಸ್ ಕೂಡಾ ಜಾರಿ ಮಾಡಿಲ್ಲ. ಅದೇ ಕಾರಣಕ್ಕಾಗಿ ಅಧಿಕಾರಿಗಳು ತಾಪಂ ಸಭೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಆರೋಪಿಸಿದರು. ಸುಮಾರು ಎರಡು ಗಂಟೆಗಳ ಕಾಲ ಸದಸ್ಯರು ಸಭಾಭವನದ ಹೊರಗಡೆ ಕಾಲ ಕಳೆದರು. ಈ ಸಮಯದಲ್ಲಿ ಮಹಿಳಾ ಸದಸ್ಯರು, ತಾಪಂ ಅಧ್ಯಕ್ಷರು, ತಾಪಂ ಇಓ ಸಭೆಯಲ್ಲಿ ಕುಳಿತೇ ಕಾಲಹರಣ ಮಾಡಿದರು. ನಂತರ ಸಾರಿಗೆ ಸಂಸ್ಥೆ ವ್ಯವಸ್ಥಾಪಕರ ಬದಲಾಗಿ ಸಾರಿಗೆ ಸಂಸ್ಥೆ ಅಧಿಕಾರಿಯೊಬ್ಬರು ಸಭೆಗೆ ಆಗಮಿಸಿದ ನಂತರ ಸದಸ್ಯರು ಬಹಿಷ್ಕಾರವನ್ನು ಹಿಂಪಡೆದು ಸಭೆಯಲ್ಲಿ ಪಾಲ್ಗೊಂಡರು. ನಂತರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ ಹಾಗೂ ಎಂಜಿನಿಯರಿಂಗ್ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಬಂದ ಅನುದಾನವನ್ನು ಮಾ.31ರೊಳಗೆ ಬಳಸಿಕೊಳ್ಳಬೇಕು. ಇಲ್ಲವಾದರೇ ಆ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಎಂದು ತಾಪಂ ಇಓ ಬಸವರಾಜಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಪಂ ಅಧ್ಯಕ್ಷ ಮೆಹರುನ್ನಿಸಾ ನೆಗಳೂರು ಸಭೆಯ ಅಧ್ಯಕ್ಷತೆ ವಹಿಸ್ದಿದರು. ಉಪಾಧ್ಯಕ್ಷ ಕಳಸೂರು ಮತ್ತಿತರರು ಹಾಜರಿದ್ದರು.