ಕಾವ್ಯದಲ್ಲಿ ರಸ, ಭಾವ ಸ್ಫುರಿಸಬೇಕು
ಹಾವೇರಿ: ಯಾವುದೇ ನಾಲ್ಕು ಶಬ್ದಗಳು ಕಾವ್ಯಗಳಾಗಲು ಸಾಧ್ಯವಿಲ್ಲ. ಅವುಗಳಲ್ಲಿ ರಸವಿರಬೇಕು. ಭಾವನೆ ಸ್ಫುರಿಸಬೇಕು. ಓದುಗನಲ್ಲೂ ಕವಿಯ ಭಾವನೆಯ ಅಂತರಾಳದ ಅರಿವಾಗುವಂತಿರಬೇಕು. ಆಗಲೇ ಅದಕ್ಕೆ ಕಾವ್ಯ ಎನ್ನಲು ಸಾಧ್ಯ. ಅದು ಮನದಾಳದ ಅಲೆ. ಪರಿಶ್ರಮದ ತುತ್ತಾಗಿದೆ ಎಂದು ಡಾ ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಸದಸ್ಯ ಜಿನದತ್ತ ದೇಸಾಯಿ ನುಡಿದರು.
ವಾರ್ತಾ ಭವನದಲ್ಲಿ ಆಯೋಜಿಸಿದ್ದ ಡಾ ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ 4 ದಿನಗಳ ಕಾವ್ಯ ರಚನೆ ಮತ್ತು ಕಾವ್ಯ ಪರಂಪರೆ ಕಲಿಸುವ ಯುವ ಕಾವ್ಯ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಮತ್ತೆ ಮತ್ತೆ ಓದಬೇಕು: ಪ್ರತಿ ಕಾವ್ಯದಲ್ಲೂ ಕವಿ ತಾನು ಕಂಡುಂಡ ನೋವು, ನಲಿವು, ಸಂಕಟ, ಸಮಸ್ಯೆ, ಹತಾಶ ಭಾವಗಳನ್ನು ಹಂಚಿಕೊಳ್ಳುತ್ತಾನೆ. ಇದರೊಂದಿಗೆ ಕವಿ ಓದುಗನ ಸಂತೋಷದ ಕಡೆಗೂ ಗಮನ ಹರಿಸಬೇಕಾಗುತ್ತದೆ. ಕಾವ್ಯ ತನ್ನ ರಚನೆಯ ಸ್ವರೂಪ ಹಾಗೂ ರಸಗ್ರಹಣ, ಸೆಳೆಯುವ ಸರಳ ಪದಗಳಿಂದ ಓದುಗನನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ ಎಂದರು.
ಅಧ್ಯಯನ ನಿರಂತರ: ಸ್ಪರ್ಧಾತ್ಮಕ ದಿನಗಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುವ ಪ್ರತಿಯೊಬ್ಬರೂ ಹಳಗನ್ನಡ, ಸಂಸ್ಕೃತ, ಇಂಗ್ಲಿಷ್ ಸೇರಿದಂತೆ ಭಾರತೀಯ ಇತರ ಭಾಷೆಯ ಸಾಹಿತ್ಯದಲ್ಲಿ ಏನು ಬರೆಯಲಾಗಿದೆ, ಸಾಹಿತ್ಯದಲ್ಲಿ ಏನೇನು ಬದಲಾವಣೆಗಳಾಗುತ್ತಿವೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ. ಆಗ ಮಾತ್ರ ಒಂದೇ ವಿಷಯವನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಲು ಸಾಧ್ಯ ಎಂದರು.
ಪರಂಪರೆ ಮಾಯ: ಗೋಕಾಕ್ ಅವರು ಬೇರೆ ಬೇರೆ ಕಾಲೇಜುಗಳಿಗೆ ಹೋದ ಸಂದರ್ಭದಲ್ಲಿ ಸ್ನೇಹಕುಂಜ, ಜಿಜ್ಞಾಸು ಕೂಟ, ವರುಣ ಕುಂಜ ಹೀಗೆ ಹಲವು ಅಭ್ಯಾಸಕೂಟಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕಾವ್ಯದ ಬಗ್ಗೆ ಆಸಕ್ತಿ ಮೂಡಿಸುವ ಜತೆಗೆ ಹೊಸ ಕವಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಆದರೆ, 4-5 ದಶಕಗಳಲ್ಲಿ ಇದ್ದ ಗುರು-ಶಿಷ್ಯ ಪರಂಪರೆ ಕಣ್ಮರೆಯಾಗುತ್ತಿದೆ. ಎಂದು ವಿಷಾದಿಸಿದರು. ಡಾ ಪಾಟೀಲ ಪುಟ್ಟಪ್ಪ, ಜಿ.ಎಂ. ಹೆಗಡೆ, ಮೋಹನ ನಾಗಮ್ಮನವರ, ಡಾ ಎನ್.ಪಿ. ಭಟ್, ಗೋಕಾಕರ ಪುತ್ರಿ ಯಶೋದಾ ಭಟ್, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಉಪಸ್ಥಿತರಿದ್ದರು.