ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಿ: ಅರಬಗೊಂಡ

Lingaraj Badiger
Updated On : 16 Mar 2013, 11:27 am

ಸವಣೂರು: ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕತೆ ಎದುರಿಸಬೇಕಾಗಿದ್ದು, ಜಾಗತೀಕರಣ, ಉದಾರೀಕರಣ ಮತ್ತು ವ್ಯಾಪಾರಿಕರಣ ನೀತಿಗಳಿಂದ ಎಲ್ಲ ರಂಗದಲ್ಲೂ ಪೈಪೋಟಿ ಹೆಚ್ಚಿದೆ. ಅದನ್ನು ಎದುರಿಸಲು ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಗಟ್ಟಿಯಾಗಬೇಕಿದೆ. ರೈತರು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.
ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಧಾರವಾಡ ಹಾಲು ಒಕ್ಕೂಟ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ  ಹಾಗೂ ಜೇಕಿನಕಟ್ಟಿ ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ಹುತ್ತಮಲ್ಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಿಶ್ರತಳಿ ಹಸು, ಎಮ್ಮೆ ಮತ್ತು ಕರುಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ, ತಾಂತ್ರಿಕ ಪರಿಕರಗಳನ್ನು ವಿತರಿಸಿದರು.
ಹೈನುಗಾರಿಗೆ ಮುಖ್ಯ ಕಸಬು: ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳದಿದ್ದಲ್ಲಿ ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗಲಾರದು. ಕೃಷಿ ಜೊತೆಗೆ ಹೈನುಗಾರಿಕೆ ಉಪ ಕಸಬಾಗಿದೆ. ಹಲವಾರು ರೈತರು ಹೈನುಗಾರಿಕೆಯಲ್ಲಿ ತಾಂತ್ರಿಕ ಬದಲಾವಣೆ ಕಂಡ ನಂತರ ಒಕ್ಕೂಟದ 4 ಜಿಲ್ಲೆಗಳಲ್ಲಿ ಪರಿವರ್ತನೆ ಕಂಡ ರೈತರು ಹೈನುಗಾರಿಕೆ ಮುಖ್ಯ ಕಸಬನ್ನಾಗಿಸಿಕೊಂಡಿದ್ದಾರೆ.
ಹಾಲು ಉತ್ಪಾದನೆ ಪ್ರಮಾಣ: ಕಳೆದ 5 ವರ್ಷಗಳಿಂದ ದಿನಕ್ಕೆ 75 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಇಂದು 35 ಸಾವಿರ ರೈತರು 1.5 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಉದ್ಯೋಗದ ಮೇಲೆ ಇಚ್ಛಾಶಕ್ತಿ ಮತ್ತು ನಂಬಿಕೆ ಬಂದ ಮೇಲೆ ರೈತರು ಆರ್ಥಿಕ ಸಬಲರಾಗಲು ಸಾಧ್ಯವಾಗಿದೆ. ಇಂದು 800 ಹಾಲು ಉತ್ಪಾದಕರ ಸಂಘದಿಂದ 1.5 ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ ಎಂದರು.
ಸಚಿವ ಬೊಮ್ಮಾಯಿ ಸಹಕಾರದಿಂದ ರು. 30 ಕೋಟಿಗಿಂತ ಹೆಚ್ಚು ನೇರ ಹಣಕಾಸು ಒದಗಿದ್ದರಿಂದ ಸಾಲದಿಂದ ಕೂಡಿಬಿದ್ದ ಹಾನಿಯಿಂದ ಮೂಲಸೌಕರ್ಯದಿಂದ ಧಾರವಾಡ ಹಾಲು ಒಕ್ಕೂಟ ಸದೃಢವಾಗಿದೆ. ಆಕಳ ಹಾಲಿಗೆ ರು. 22 ಬೆಲೆ ಸಿಗುತ್ತಿರುವುದು ಬೊಮ್ಮಾಯಿ ಸಹಕಾರದಿಂದ ಸಾಧ್ಯವಾಗಿದೆ. ಹಾಲಿನ ಪೌಡರ್ ತಯಾರಿಕೆಯಲ್ಲಿನ ಅರ್ಧದಷ್ಟು ಹಾನಿಯನ್ನು ಸರ್ಕಾರದಿಂದ ತುಂಬಿಸಿಕೊಡಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಪ್ರತಿ ತಿಂಗಳು 200 ಮೆಟ್ರಿಕ್ ಟನ್ ಹಾಲಿನ ಪೌಡರ್‌ನ್ನು ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ಮುಖಾಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲದಿದ್ದಲ್ಲಿ ಎಲ್ಲ ಒಕ್ಕೂಟಗಳು ಸುಮಾರು 300 ಕೋಟಿ ನಷ್ಟ ಅನುಭವಿಸಬೇಕಾಗಿತ್ತು. ರೈತರಿಗೆ ಬೆಂಬಲ ಬೆಲೆಯಾಗಿ 2.20 ಪೈಸೆ ನೀಡಲಾಗಿದೆ ಎಂದರು.
ತಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ ಪ್ರದರ್ಶನ, ವಿಚಾರ ಸಂಕೀರಣ ಉದ್ಘಾಟಿಸಿದರು. ದೇವೇಂದ್ರಗೌಡ ಮುಂದಿನಮನಿ, ಕೆಎಂಎಫ್ ನಿರ್ದೇಶಕ ಫಕ್ಕೀರಪ್ಪ ವಾಲ್ಮೀಕಿ, ಜಿಪಂ ಸದಸ್ಯೆ ಡಾ. ಶೋಭಾ ನಿಸ್ಸೀಮಗೌಡ್ರ, ತಾಪಂ ರಮೇಶ ಅರಗೋಳ, ಸಹಾಯಕ ನಿರ್ದೇಶಕ ಎಸ್.ಎಸ್. ಪಾಟೀಲ, ರಾಜು ಕೋಲೆರ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement