ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪುರಸಭೆ-ಎಪಿಎಂಸಿ ಹಗ್ಗಜಗ್ಗಾಟ: ಜನರ ಪರದಾಟ

Lingaraj Badiger
Updated On : 16 Mar 2013, 11:30 am

- ಶಿವಾನಂದ ಮಲ್ಲನಗೌಡರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ.15
ಪುರಸಭೆ ಹಾಗೂ ಎಪಿಎಂಸಿ ನಡುವಿನ ಹಗ್ಗಜಗ್ಗಾಟದಿಂದಾಗಿ ಸ್ಥಳೀಯ ಎಪಿಎಂಸಿ ಪ್ರವೇಶ ದ್ವಾರದ ಪಕ್ಕದಲ್ಲಿ ಬಿದ್ದಿರುವ ಕಸದರಾಶಿ ಸಾರ್ವಜನಿಕರಿಗೆ ದುರ್ವಾಸನೆ ಬೀರುತ್ತಿದೆ. ಸ್ವಚ್ಛತೆಗಾಗಿ ಲಕ್ಷಗಟ್ಟಲೇ ಹಣ ವ್ಯಯ ಮಾಡುತ್ತಿರುವ ಎರಡೂ ಸಂಸ್ಥೆಗಳ ನಿರ್ಲಕ್ಷ್ಯ ಮನೋಭಾವನೆಯಿಂದಾಗಿ ವಿಶ್ವ ವಿಖ್ಯಾತ ಮಾರುಕಟ್ಟೆಯೊಂದಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ವಿಲೇವಾರಿಯಾಗದ ಕಸ: ಪಟ್ಟಣದ ಹೃದಯ ಭಾಗದಲ್ಲಿದ್ದ ರಾಮನಕಟ್ಟೆ ಕೆರೆಯನ್ನು ಮುಚ್ಚಿ ಎಪಿಎಂಸಿ ಪ್ರವೇಶಿಸಲು ರಸ್ತೆ ನಿರ್ಮಿಸಲಾಯಿತು. ಆದರೆ, ರಸ್ತೆ ಹೊರತುಪಡಿಸಿ ಇನ್ನುಳಿದ ಭಾಗ ಮೇಲಿನ ಎರಡೂ ಸಂಸ್ಥೆಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸ್ವಚ್ಛತೆಯಿಲ್ಲದೇ ದುರ್ವಾಸನೆ ಹೊರ ಸೂಸುತ್ತಿರುವ ಈ ಪ್ರದೇಶದಲ್ಲಿ ಸಂಗ್ರಹವಾಗಿರುವ ಘನ ತ್ಯಾಜ್ಯ ವಸ್ತು ಹಲವಾರು ದಿನಗಳಿಂದ ವಿಲೇವಾರಿಯಾಗಿಲ್ಲ ಎಂಬುದು ಸಾರ್ವಜನಿಕರಿಂದ ಕೇಳಿಬರುತ್ತಿರುವ ಆರೋಪ.
ರೋಗ ಹರಡುವ ಭೀತಿ: ಈ ಪ್ರದೇಶದ ಸುತ್ತಲೂ ಸಂಜೆ ವೇಳೆಗೆ ಗೂಡಂಗಡಿಗಳ ವ್ಯಾಪಾರ ಆರಂಭವಾಗುತ್ತದೆ. ಈ ಸಮಯ ಚೆಲ್ಲುವ ಕಸ ಮತ್ತು ನೀರು ಅಲ್ಲಲ್ಲಿ ಸಂಗ್ರಹವಾಗುತ್ತಿದ್ದು, ಹರಿದು ಹೋಗದೇ ನೀರು ನಿಂತಲ್ಲೇ ನಿಂತಿದೆ.
ಹೀಗಾಗಿ ಈ ಪ್ರದೇಶದಲ್ಲಿ ಸೊಳ್ಳೆಗಳು ಉತ್ಪಾದನೆಯಾಗುತ್ತಿವೆ. ಅಲ್ಲದೆ ಹಂದಿಗಳ ತಾಣವಾಗಿ ಪರಿಣಮಿಸುತ್ತಿದೆ. ಇದರಿಂದ ಮಾರುಕಟ್ಟೆ ಪ್ರವೇಶಿಸುವ ಪ್ರತಿಯೊಬ್ಬರೂ ಮೂಗು ಮುಚ್ಚಿಕೊಂಡೇ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ. ನಿಂತ ನೀರಿನಿಂದಾಗಿ ರೋಗ ಹರಡುವ ಲಕ್ಷಣಗಳು ಕಾಣಿಸುತ್ತಿವೆ.
ಬಯಲು ಶೌಚಾಲಯ: ಎಪಿಎಂಸಿ ವ್ಯಾಪ್ತಿಯಲ್ಲಿ ರೈತರ ಅನುಕೂಲಕ್ಕಾಗಿ ಸೂಕ್ತ ಶೌಚಾಲಯ ಇಲ್ಲದಿರುವುದರಿಂದ ಮೆಣಸಿನಕಾಯಿ ಮಾರಾಟಕ್ಕೆ ಬಂದ ರೈತರು ಈ ಪ್ರದೇಶದಲ್ಲಿ ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಸೂಕ್ತ ನಿರ್ವಹಣೆಯಿಲ್ಲದೆ ಈ ಪ್ರದೇಶ ಇನ್ನಷ್ಟು ಮಲಿನವಾಗುತ್ತಿದೆ.
ಯಾರು ಹೊಣೆ?: ಸದರಿ ಜಾಗಕ್ಕೆ ಹೊಂದಿಕೊಂಡಿರುವ ಕೆಲ ಮಳಿಗೆಗಳ ವ್ಯಾಪಾರಸ್ಥರು ಈ ಕುರಿತು ಪುರಸಭೆಗೆ ಮನವಿ ಮಾಡಿದರೂ ಕಸ ವಿಲೇವಾರಿ ಎಪಿಎಂಸಿಗೆ ಸಂಬಂಧಿಸಿದೆ ಎನ್ನುತ್ತಾರೆ.
ಎಪಿಎಂಸಿಯವರನ್ನು ಸಂಪರ್ಕಿಸಿದರೆ ರಸ್ತೆ ಮೇಲಿನ ಕಸ ವಿಲೇವಾರಿ ನಮ್ಮ ಕೆಲಸ ಉಳಿದ ಪ್ರದೇಶದಲ್ಲಿರುವುದು ಪುರಸಭೆಗೆ ಸಂಬಂಧಿಸಿದ ವಿಷಯ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಹೀಗಾಗಿ ಎಪಿಎಂಸಿ ಹಾಗೂ ಪುರಸಭೆ ನಡುವಿನ ಹಗ್ಗಜಗ್ಗಾಟದಿಂದ ಕಸ ವಿಲೇವಾರಿಯಾಗದೇ ಉಳಿದಿದೆ.

ಜಂಟಿಯಾಗಿ ಸ್ವಚ್ಛತೆ
ಪುರಸಭೆ ವ್ಯಾಪ್ತಿಯ ಎಲ್ಲ ಬಯಲು ಜಾಗೆಗಳ ಸ್ವಚ್ಛತೆ ಜವಾಬ್ದಾರಿ ನಮ್ಮದು. ಆದರೆ, ರಾಮನಕಟ್ಟೆ ಕೆರೆ ಪ್ರದೇಶ ಯಾರ ಒಡೆತನದಲ್ಲಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಹೀಗಿದ್ದಾಗ್ಯೂ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಎಪಿಎಂಸಿ ಕಾರ್ಯದರ್ಶಿಯವರನ್ನು ಸಂಪರ್ಕಿಸಿ ಸೂಕ್ತ ಕ್ರಮ ಜರುಗಿಸಲಾಗುವುದು.
ಣ ಎ.ಬಿ. ಹಾಳಕಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement