ಶಿಶುವಿನಹಾಳ: 22ರಂದು ರಥೋತ್ಸವ
ಹಾವೇರಿ: ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಶರೀಫ್ ಶಿವಯೋಗಿ ಹಾಗೂ ಗುರು ಗೋವಿಂದ ಶಿವಯೋಗಿಗಳ ಮಹಾರಥೋತ್ಸವ ಮಾ. 22ರಂದು ವಿಜೃಂಭಣೆಯಿಂದ ಜರುಗಲಿದೆ. ಮಹಾರಥೋತ್ಸವದ ಅಂಗವಾಗಿ ಮಾ. 21ರಂದು ಬೆಳಗ್ಗೆ 9ಕ್ಕೆ ಭಾವೈಕ್ಯ ಧ್ವಜಾರೋಹಣ, ಸಂಜೆ 4ಕ್ಕೆ ಶಿಶುನಾಳಧೀಶನ ದೇವಸ್ಥಾನದಿಂದ ಶರೀಫಗಿರಿವರೆಗೆ ತೇರಿನ ಕಳಸದ ಮೆರವಣಿಗೆ, ನಂತರ ಕಳಸಾರೋಣ ಜರುಗಲಿದೆ. ಮಾ. 23ರಂದು ಸಂಜೆ 5ಕ್ಕೆ ಕಡುಬಿನ ಕಾಳಗ ಜರುಗುವುದು. ಮಾ. 22ರಂದು ರಾತ್ರಿ 9ರಿಂದ ವಿವಿಧ ಜಾನಪದ ತಂಡದವರಿಂದ ಜಾನಪದ ಕಾರ್ಯಕ್ರಮ, ರಾತ್ರಿ 10.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಿದ್ದು ಮೋಟೆ ಹಾಗೂ ಸಂಗಡಿಗರಿಂದ ಡೊಳ್ಳಿನ ಪದ, ವಿರೇಶ ಬಡಿಗೇರ ಹಾಗೂ ಬಸವರಾಜ ಶಿಗ್ಗಾಂವಿ ಅವರಿಂದ ಶರೀಫರ ತತ್ವಪದ ಮತ್ತು ಜಾನಪದ ಗೀತೆಗಳ ಕಾರ್ಯಕ್ರಮ ನಡೆಲಿವೆ ಎಂದು ಪಂಚಾಗ್ನಿಮಠದ ಪ್ರಕಟಣೆ ತಿಳಿಸಿದೆ.
ಪುರಾಣ ಪ್ರಾರಂಭ
ಹಿರೇಕೆರೂರು: ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಇತ್ತೀಚೆಗೆ ಕಲಬುರ್ಗಿ ಶರಣ ಬಸವೇಶ್ವರರ 36ನೇ ವರ್ಷದ ಪುರಾಣ ಪ್ರಾರಂಭೋತ್ಸವ ಜರುಗಿತು. ಪ್ರತಿದಿನ ರಾತ್ರಿ 8ರಿಂದ ಪುರಾಣ ಪ್ರವಚನ ಕಾರ್ಯ 1 ತಿಂಗಳ ಪರ್ಯಂತರ ಜರುಗಲಿದೆ. ಬಸಯ್ಯ ಸ್ವಾಮಿಗಳು ಪುರಾಣ ಪ್ರವಚನ ನಡೆಸಿ ಕೊಡಲಿದ್ದಾರೆ. ಕಲ್ಲೂರ ಕೊಟ್ರಯ್ಯಸ್ವಾಮಿ ಸಂಗೀತ, ಖಾನಾಸಾಬ ಕಲ್ಲೂರು ತಬಲಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.