ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉದಾಸಿ ವಿರುದ್ಧ ಸೊಲಬೇಶ್ವರಪ್ಪ

Parashurama
Updated On : 17 Mar 2013, 11:50 am

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 16
ಸೇವಾ ಅವಧಿಯಲ್ಲಿ ಹತ್ತಾರು ರೌಡಿಗಳನ್ನು ಮಟ್ಟ ಹಾಕುವ ಮೂಲಕ ಸಮಾಜ ಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನನಾಗಿದ್ದ ಹಾಗೂ ಇದೇ ಸಮಯದಲ್ಲಿ ಹಲವಾರು ಸಾಮಾಜಿಕ ಕಾರ್ಯ ಮಾಡುವ ಮೂಲಕ ಬಡಜನತೆಗೆ ಆಪ್ತರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಕೆ. ಸೊಲಬೇಶ್ವರಪ್ಪ ಈಗ ಮಾಜಿ ಸಚಿವ ಸಿ.ಎಂ. ಉದಾಸಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ.
ಹೌದು, ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಸೊಲಬೇಶ್ವರಪ್ಪ ಅವರನ್ನು ಕಣ್ಣಕ್ಕೆ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ. ಕೆಲವೇ ದಿನಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಎಂ.ಕೆ. ಸೊಲಬೇಶ್ವರಪ್ಪ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೇ ತಳಮಟ್ಟದಿಂದ ಸಂಘಟನೆ ಹಾಗೂ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು, ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ, ಇದೀಗ ಕೆಜೆಪಿಯಲ್ಲಿ ಗುರುತಿಸಿಕೊಂಡಿರುವ ಸಿ.ಎಂ. ಉದಾಸಿ ಅವರ ವಿರುದ್ಧ ಕಾಂಗ್ರೆಸ್ ತನ್ನ ಹುರಿಯಾಳನ್ನಾಗಿ ಸೊಲಬೇಶ್ವರಪ್ಪ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಸೊಲಬೇಶ್ವರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದಾಗ ಮಟ್ಟ ಹಾಕಿದ್ದ ಸಮಾಜ ಘಾತುಕ ಶಕ್ತಿಗಳು ಹಾಗೂ ಅವರು ಮಾಡಿರುವ ಹತ್ತು ಹಲವು ಸಾಮಾಜಿಕ ಕಾರ್ಯಗಳು ಅವರನ್ನು ಜನಾನುರಾಗಿಯನ್ನಾಗಿಸಿವೆ.
ವಿದ್ಯಾರ್ಥಿ ನಾಯಕ: ಎಂ.ಕೆ. ಸೊಲಬೇಶ್ವರಪ್ಪ ದಾವಣಗೆರೆಯ ಡಿಆರ್‌ಎಂ ಕಾಲೇಜಿನಲ್ಲಿದ್ದಾಗ 1975-76ರಲ್ಲಿ ವಿದ್ಯಾರ್ಥಿ ನಾಯಕರಾಗಿ ಚುನಾಯಿತಗೊಂಡಿದ್ದರು. ಬಿಇಡಿ, ರಾಜ್ಯಶಾಸ್ತ್ರ ವಿಷಯದಲ್ಲಿ ಎಂಎ (ದೂರ ಶಿಕ್ಷಣ) ಪದವಿ ಪಡೆದ ಇವರು, 1978-79ರಲ್ಲಿ ಪೊಲೀಸ್ ಇಲಾಖೆ ಸೇರಿದರು. ಹಾವೇರಿ, ಗದಗ, ಬಾದಾಮಿ ತಾಲೂಕಿನ ಕೆರೂರ, ಹುಬ್ಬಳ್ಳಿ ಗ್ರಾಮಾಂತರ, ಹುಬ್ಬಳ್ಳಿ ಶಹರ, ಬೆಂಡಿಗೇರಿ, ಧಾರವಾಡ ಶಹರ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 1993-94ರಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಹೊಂದಿ ಸಿಓಡಿ, ಕಮರಿಪೇಟೆ, ವಿದ್ಯಾಗಿರಿ, ಹೊಳೆನರಸೀಪುರ ಸರ್ಕಲ್‌ಗಳಲ್ಲಿ ಕೆಲಸ ಮಾಡಿದ್ದಾರೆ.  ನಂತರ ಡಿವೈಎಸ್‌ಪಿ ಆಗಿ ಮುಂಬಡ್ತಿ ಹೊಂದಿ, ಅರಣ್ಯ ಜಾಗೃತ ದಳ, ದಾವಣಗೆರೆ, ಸಂಚಾರಿ ಪೂರ್ವ ವಿಭಾಗ ಬೆಂಗಳೂರು, ಚಿಕ್ಕಪೇಟೆ ಉಪ ವಿಭಾಗ, ಬೆಂಗಳೂರು ನಗರ, ಶೇಷಾದ್ರಿಪುರಂ ಉಪ ವಿಭಾಗ ಬೆಂಗಳೂರು ನಗರ ಇಲ್ಲಿ ಎಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದ ಹಲವಾರು ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಹುಬ್ಬಳ್ಳಿಯಲ್ಲಿ ಯಂಗಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್ ಹುಟ್ಟು ಹಾಕಿದರು. ಕಳ್ಳತನ, ಪಿಕ್‌ಪಾಕೆಟ್ ಸೇರಿದಂತೆ ವಿವಿಧ ರೀತಿಯ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಯುವಕರನ್ನು ಕರೆತಂದು ಈ ಕ್ಲಬ್ ಮೂಲಕ ಅಂಥವರಿಗೆ ಸಮಾಜಮುಖಿ ಶಿಕ್ಷಣ ನೀಡಿದರು. ಈ ಕ್ಲಬ್ ಮೂಲಕ ಹಲವಾರು ಬಡ ಪ್ರತಿಭೆಗಳಿಗೆ ಹಾಕಿ ತರಬೇತಿ ಕೊಡಿಸಿದರು. ಈ ಕ್ಲಬ್‌ನಲ್ಲಿ ಹಾಕಿ ತರಬೇತಿ ಪಡೆದ ರಾಮು ಬಳ್ಳಾರಿ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚಿದರು. ಈಗಲೂ ಈ ಕ್ಲಬ್‌ನ ಇಬ್ಬರು ಪ್ರತಿಭೆಗಳು ರಾಜ್ಯ ಹಾಕಿ ತಂಡದಲ್ಲಿದ್ದಾರೆ. ರೋಟರಿ, ಲಯನ್ಸ್ ಕ್ಲಬ್‌ಗಳ ಮೂಲಕ ಬಡವರಿಗೆ ಆರ್ಥಿಕ ಸಹಾಯ ಕೊಡಿಸಿದರು. ಕಾನ್ವೆಂಟ್‌ಗಳಲ್ಲಿ ಶೇ. 20ರಷ್ಟು ಸೀಟುಗಳನ್ನು ಉಚಿತವಾಗಿ ಬಡಮಕ್ಕಳಿಗೆ ನೀಡುವಂತೆ ಇವರು ಮಾಡಿದ್ದ ಹೋರಾಟ ಯಶಸ್ವಿಯಾಯಿತು.
ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ವಹಿಸಿದ ಕರ್ತವ್ಯಕ್ಕಾಗಿ ರಾಜ್ಯ ಸರ್ಕಾರ 2000ನೇ ಇಸ್ವಿಯಲ್ಲಿ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿತು. ದಾವಣಗೆರೆಯಲ್ಲಿ ಡಿಎಸ್ಪಿಯಾಗಿದ್ದಾಗ ಉಗ್ರರನ್ನು ಸೆರೆ ಹಿಡಿದಿದ್ದಕ್ಕಾಗಿ ರಾಜ್ಯ ಸರ್ಕಾರ 2007ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಪದಕ ನೀಡಿತು. 2011ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಪದಕ ನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments