ಬ್ಯಾಡಗಿ: ವರ್ಷದ ಮೊದಲ ಮಳೆ ಸಂಭ್ರಮ
ಬ್ಯಾಡಗಿ: ಪಟ್ಟಣ ಹಾಗೂ ತಾಲೂಕಿನ ಹಲವೆಡೆ ಶನಿವಾರ ಸಂಜೆ ತಾಸಿಗೂ ಹೆಚ್ಚು ಕಾಲ ಗುಡುಗು ಸಹಿತ ಅಕಾಲಿಕ ಮಳೆಯಾಗಿದೆ. ಸಂಜೆವರೆಗೂ ಬಿಸಿಲಿತ್ತು. ಆರು ಗಂಟೆ ಸುಮಾರಿಗೆ ಮೋಡ ಕವಿಯಿತು. ಗುಡುಗು - ಮಿಂಚಿನ ಸಹಿತ ಮಳೆ ಜಿಟಿಜಿಟಿ ಆರಂಭವಾದ ಮಳೆ ಬಳಿಕ ಧಾರಾಕಾರ ಸುರಿಯಿತು. ಪ್ರಸಕ್ತ ವರ್ಷ ಮೊದಲ ಮಳೆಯಾಗಿದ್ದು, ಎಪಿಎಂಸಿ ಯಾರ್ಡ್ನಲ್ಲಿ ವರ್ತಕರು ಮೆಣಸಿನಕಾಯಿ ರಾಶಿ ಮುಚ್ಚುವ ಯತ್ನದಲ್ಲಿ ತೊಡಗಿದ್ದರು. ಶನಿವಾರ ಪಟ್ಟಣದಲ್ಲಿ ಸಂತೆಯ ದಿನವೂ ಆಗಿದ್ದರಿಂದ ವ್ಯಾಪಾರಕ್ಕೆ ಅಡ್ಡಿಯಾಯಿತು. ಮಳೆ ರೈತರಲ್ಲಿ ಸಂತಸ ಮೂಡಿಸಿದ್ದರೂ ಕಣದಲ್ಲಿದ್ದ ಗೋವಿನಜೋಳದ ತೆನೆ ರಾಶಿಗಳನ್ನು ಮುಚ್ಚಲು ಪರದಾಡುವಂತಾಯಿತು. ಹೋಳಿ ಹುಣ್ಣಿಮೆ ಸಮೀಪಿಸಿದ್ದರಿಂದ ಇದು ಬೀಜಗಟ್ಟುವ ಮಳೆ. ಆದರೂ ಹೊಲಗಳಲ್ಲಿ ಇನ್ನೂ ಮುಂಗಾರು ಕೊನೆಯ ಬೀಡಿನ ಹತ್ತಿಯನ್ನು ಬಿಡಿಸದೆ ಹಾಗೇ ಉಳಿಸಿಕೊಂಡಿದ್ದಾರೆ, ನೆಲಕ್ಕೆ ಬಿದ್ದ ಮಳೆ ಹನಿ ಹತ್ತಿ ಬೆಳೆಗೆ ಮಣ್ಣನ್ನು ಎರಚುತ್ತದೆ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗುತ್ತದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಆತಂಕ ವ್ಯಕ್ತಪಡಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.