ಟಿ.ಎನ್. ಸೀತಾರಾಂಗೆ ವಿ.ಪಿ. ಲದ್ವಾ ಪ್ರಶಸ್ತಿ
ರಾಣಿಬೆನ್ನೂರು: ಪ್ರಸಕ್ತ ಸಾಲಿನ ವಿ.ಪಿ. ಲದ್ವಾ ಪ್ರಶಸ್ತಿ ಖ್ಯಾತ ಬರಹಗಾರ ಹಾಗೂ ಧಾರವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ ಅವರಿಗೆ ಲಭಿಸಿದೆ ಎಂದು ಪ್ರತಿಷ್ಠಾನದ ಸಂಚಾಲಕ ಪ್ರೊ. ಸಿ.ಎನ್. ಜಗದೇವನವರ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಷ್ಠಾನದ 2013ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮಾ. 20ರಂದು ಸಂಜೆ 6ಕ್ಕೆ ಇಲ್ಲಿನ ನೆಹರು ಮಾರ್ಕೆಟ್ ವರ್ತಕರ ಸಭಾ ಭವನದಲ್ಲಿ ನಡೆಯಲಿದೆ ಎಂದರು. ವಾಸುದೇವಸಾ ಲದ್ವಾ ಅವರು, ಕನ್ನಡ ನಾಡು ನುಡಿ ಸಂಸ್ಕೃತಿಯ ಸೇವೆಗಾಗಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ ಈ ಪ್ರತಿಷ್ಠಾನ ಆರಂಭಿಸಿದ್ದಾರೆ. ಕಳೆದ 7 ವರ್ಷಗಳಿಂದ ಪ್ರತಿಷ್ಠಾನ ಇಂಥ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಧಕರನ್ನು ಸನ್ಮಾನಿಸಿ, ಗೌರವಿಸಿದೆ. 2007ರಲ್ಲಿ ಸಾಹಿತಿ ಕುಂವೀ, 2008ರಲ್ಲಿ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ, 2009ರಲ್ಲಿ ಖ್ಯಾತ ಹಿಂದುಸ್ಥ್ಧಾನಿ ಸಂಗೀತ ಕಲಾವಿದೆ ಸಂಗಿತಾ ಕಟ್ಟಿ, 2010ರಲ್ಲಿ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ, 2011ರಲ್ಲಿ ಪದ್ಮರಾಜ ದಂಡಾವತಿ ಹಾಗೂ 2012ರಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಅವರನ್ನು ಗೌರವಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮನೆ ಮನಗಳ ಹೃದಯಕ್ಕೆ ಲಗ್ಗೆ ಹಾಕಿದ ಮುಕ್ತ ಮುಕ್ತ ಧಾರಾವಾಹಿಯ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ಭಾಜನರಾಗಿದ್ದಾರೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ವಾಸುದೇವ ಲದ್ವಾ ಮಾತನಾಡಿ, ಪ್ರಸಕ್ತ ಸಾಲಿನಿಂದ ಪ್ರಶಸ್ತಿಯ ಮೊತ್ತವನ್ನು ರು. 10 ಸಾವಿರದಿಂದ ರು. 25 ಸಾವಿರಕ್ಕೆ ಏರಿಸಲಾಗಿದೆ ಎಂದರು. ಈ ಸಂದರ್ಭ ಉಪಾಧ್ಯಕ್ಷೆ ವಜ್ರೇಶ್ವರಿ ಲದ್ವಾ, ಗಿರಿಜಾ ದುರ್ಗದಮಠ, ಇತರರಿದ್ದರು.