ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಗರಸಭೆ ಅತಂತ್ರ: ಪಕ್ಷೇತರರೇ ನಿರ್ಣಾಯಕ

Mainashree
Updated On : 18 Mar 2013, 10:56 am

 ಕಿರಣ ಮಾಸಣಗಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮಾ. 17

ಜಿಲ್ಲೆಯ ದೊಡ್ಡ ನಗರ ಎಂಬ ಖ್ಯಾತಿಯ ರಾಣಿಬೆನ್ನೂರು ನಗರಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತದಾರ ಯಾವುದೇ ಪಕ್ಷಗಳಿಗೂ ಬಹುಮತ ನೀಡದೆ ಅತಂತ್ರ ಸ್ಥಿತಿಗೆ ನೂಕಿದ್ದಾನೆ. ಇದರಿಂದಾಗಿ ಅತಿ ಹೆಚ್ಚಿನ ಸ್ಥಾನ ಪಡೆದ ಕಾಂಗ್ರೆಸ್ ಹಾಗೂ ಎರಡನೇ ಸ್ಥಾನದಲ್ಲಿರುವ ಕೆಜೆಪಿ ಪಕ್ಷಕ್ಕೂ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ. ಯಾವುದೇ ಪಕ್ಷ ಆಡಳಿತ ವಹಿಸಿಕೊಳ್ಳಬೇಕೆಂದರೂ ಪಕ್ಷೇತರರೇ ನಿರ್ಧಾರಕ ಶಕ್ತಿಯಾಗಿ ಪರಿಣಮಿಸಿದ್ದಾರೆ.
ಪಕ್ಷಗಳ ಬಲಾಬಲ: ರಾಣಿಬೆನ್ನೂರು ನಗರಸಭೆ ಚುನಾವಣೆಯಲ್ಲಿ 31 ವಾರ್ಡ್‌ಗಳಿಗೆ ಚುನಾವಣೆ ಜರುಗಿ, ಅದರಲ್ಲಿ ಕಾಂಗ್ರೆಸ್ 13, ಕೆಜೆಪಿ 9 ಹಾಗೂ ಪಕ್ಷೇತರರು 6 ಸ್ಥಾನ ಹಾಗೂ ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿವೆ. ಇದರಿಂದಾಗಿ ಇಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಕೆಜೆಪಿಗೆ ಪಕ್ಷೇತರರ ಬೆಂಬಲ ಅಗತ್ಯವಾಗಿದ್ದು, ಇದು ಪಕ್ಷೇತರರಿಗೆ ಬೇಡಿಕೆ ಹೆಚ್ಚಿದೆ.
ಹೊಂದಾಣಿಕೆ ಸಾಧ್ಯವೇ?: ಅತಿಹೆಚ್ಚು ಸ್ಥಾನ ಪಡೆದಿರುವ ಕಾಂಗ್ರೆಸ್‌ಗೆ ಆಡಳಿತ ನಡೆಸಲು 3 ಸ್ಥಾನಗಳ ಆವಶ್ಯಕತೆ ಇದೆ. ಇಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಷ್ಟೇ ಜಯ ಸಾಧಿಸಿದ್ದು, ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದಾದರೂ ತಾತ್ವಿಕವಾಗಿ ಅದು ವಿರೋಧ ಪಕ್ಷದ ಸಾಲಿನಲ್ಲಿ ಕೂಡಲು ಆಸಕ್ತಿ ತೋರಿದೆ. ಇನ್ನು 2ನೇ ಸ್ಥಾನದಲ್ಲಿರುವ ಕೆಜೆಪಿಗೆ 7 ಸದಸ್ಯರ ಬೆಂಬಲ ಬೇಕಿದೆ. ಆದರೆ, ವಾಸ್ತವವಾಗಿ ಪಕ್ಷೇತರರನ್ನು ಸೇರಿಸಿಕೊಂಡಾಗ್ಯೂ ಕೆಜೆಪಿಗೆ ಅಧಿಕಾರಕ್ಕೇರಲು ಬಿಜೆಪಿ ಸಾಥ್ ಬೇಕೇ ಬೇಕು. ಸದ್ಯದ ಸ್ಥಿತಿಯಲ್ಲಿ ಕೆಜೆಪಿ-ಬಿಜೆಪಿ ಹಾವು-ಮುಂಗುಸಿಯಂತಾಗಿದ್ದು, ಇದು ಸಾಧುವಲ್ಲ. ಆದರೂ ರಾಜಕೀಯ ತಿರುವು ಹೇಳಲಿಕ್ಕಾಗದು. ಅನಿವಾರ್ಯವಾಗಿ ಹೆಚ್ಚಿನ ಸ್ಥಾನ ಗಳಿಸಿರುವ ಕಾಂಗ್ರೆಸ್ ಪಕ್ಷೇತರರನ್ನು ನೆಚ್ಚಲೇಬೇಕಿದೆ.
13 ಸ್ಥಾನ ಗಳಿಸಿರುವ ಕಾಂಗ್ರೆಸ್‌ಗೆ ಮ್ಯಾಜಿಕ್ ಸಂಖ್ಯೆ 16ನ್ನು ತಲುಪಲು ಕೇವಲ 3 ಸದಸ್ಯರ ಅಗತ್ಯ ಇದೆ. ಇದನ್ನು ಸರಿದೂಗಿಸಲು ಪಕ್ಷೇತರನ್ನು ಓಲೈಸುವ ಯತ್ನ ನಡೆದಿವೆ. ಇದು ಕೊಂಚ ಶ್ರಮದಾಯಕವಾಗಿದೆ.
ಕಾರಣ ಈಗ ಪಕ್ಷೇತರರಾಗಿ ಜಯಿಸಿದವರೆಲ್ಲರೂ ಆರ್. ಶಂಕರ ಅಭಿಮಾನಿಗಳು ಎಂಬುದೇ ಇದರ ಟರ್ನಿಂಗ್ ಪಾಯಿಂಟ್.
ಆರ್. ಶಂಕರ: ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಕಳೆದೆರಡು ವರ್ಷದಿಂದ ರಾಣಿಬೆನ್ನೂರಲ್ಲೇ ವಾಸ್ತವ್ಯ ಹೂಡಿರುವ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಆರ್. ಶಂಕರ ಈಗಾಗಲೇ 2 ವರ್ಷಗಳಿಂದ ತಾಲೂಕಿನಲ್ಲಿ ದಾನ, ಧರ್ಮಗಳನ್ನು ನಡೆಸುವ ಮೂಲಕ ತಾವು ಅಭ್ಯರ್ಥಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಕಾಂಗ್ರೆಸ್ ಮುಖಂಡರಲ್ಲಿ ಇರುಸು-ಮುರುಸು ಉಂಟು ಮಾಡಿತ್ತು. ಅದಕ್ಕಾಗಿ ಕಾಂಗ್ರೆಸ್ ಮುಖಂಡರು ಆರ್. ಶಂಕರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಪ್ರಕಟಣೆ ನೀಡುವ ಮೂಲಕ ತಮ್ಮ ಅಳುಕನ್ನು ಹೊರ ಹಾಕಿದ್ದರು. ಆದರೆ, ಇದಕ್ಕೆ ಜಪ್ಪೆನ್ನದ ಆರ್. ಶಂಕರ ತಮ್ಮ ಪರ ಪ್ರಚಾರ ಮುದುವರೆಸಿದ್ದಲ್ಲದೆ ನಗರಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ಗೆ ಸವಾಲು ಹಾಕಿದ್ದರು. ಇವರ ಸವಾಲಿಗೆ ಮತದಾರ ಉತ್ತಮ ಅಲ್ಲದಿದ್ದರೂ ನಿರ್ಣಾಯಕ ಎಂಬಷ್ಟು ಆರು ಜನರನ್ನು ಆಯ್ಕೆ ಮಾಡಿದ್ದು ಶಂಕರ್ ಭುಜಬಲ ಹೆಚ್ಚಿಸಿದಂತಾಗಿದೆ. ರಾಣಿಬೆನ್ನೂರು ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ. ಇಂಥ ಸಂದರ್ಭ ಬಳಸಿಕೊಂಡು ಕಾಂಗ್ರೆಸ್ ಸ್ಥಳೀಯ ನಾಯಕರು ಪಕ್ಷೇತರರನ್ನು ಸೆಳೆಯಲು ಕಸರತ್ತು ನಡೆಸಿದ್ದು, ಎಲ್ಲ 6 ಜನರನ್ನು ಮನವೊಲಿಸದೆ ತಮಗೆ ಅವಶ್ಯಕವಿರುವ ಆಯ್ದ ಮೂರು ಜನರಿಗೆ ಮಾತ್ರ ಗಾಳ ಹಾಕಲು ಯತ್ನಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಆರ್. ಶಂಕರ ಪಕ್ಷೇತರ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳುವ ಮೂಲಕ ತಮ್ಮ ಮುಷ್ಟಿ ಬಿಗಿಗೊಳಿಸಿದ್ದಾರೆ. ಇದರಿಂದ ಪಕ್ಷೇತರರು ಯಾರಿಗೂ ದಕ್ಕದೆ ಕಾಂಗ್ರೆಸ್ ಮತ್ತೆ ಶಂಕರ್ ಅವರನ್ನೇ ಆಶ್ರಯಿಸುವಂತಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್‌ಗೆ ಇದು ಇತ್ತ ದರಿ ಅತ್ತ ಪುಲಿ ಎಂಬ ಸ್ಥಿತಿಗೆ ನೂಕಿದೆ. ಪಕ್ಷೇತರರನ್ನು ಇಡಿಯಾಗಿ ಇಲ್ಲವೇ ಬಿಡಿಯಾಗಿ ಬೆಂಬಲ ಕೋರಿದಲ್ಲಿ ಅಪ್ರತ್ಯಕ್ಷವಾಗಿ ಆರ್. ಶಂಕರ್ ಅವರನ್ನೇ ಓಲೈಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement