ಅಗತ್ಯಕ್ಕೆ ತಕ್ಕ ಸಾಲ ಪಡೆಯಿರಿ: ರಾಜಶೇಖರ ಸಿಂಧೂರ
ಸವಣೂರು: ರೈತರು ಸರ್ಕಾರದ ವಿರುದ್ಧ ಆಪಾದಿಸುವುದನ್ನು ಬಿಟ್ಟು ಅವಶ್ಯವಿದ್ದಲ್ಲಿ ಮಾತ್ರ ಸಾಲ ಪಡೆಯಬೇಕು. ಸಹಕಾರಿ ಬ್ಯಾಂಕುಗಳು ರೈತರ ಪರಸ್ಪರ ಸಹಕಾರದಿಂದ ಮಾತ್ರ ಉಳಿಯಲು ಸಾಧ್ಯ ಎಂದು ಸಾವಯವ ಕೃಷಿಕ, ಮಾಜಿ ಶಾಸಕ ರಾಜಶೇಖರ ಸಿಂಧೂರ ತಿಳಿಸಿದರು.
ಸವಣೂರಿನ ಕೆಸಿಸಿ ಬ್ಯಾಂಕ್ನಲ್ಲಿ ರೈತರ ಸಾಲ ಮರುಪಾವತಿ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಸಿ ಕೃಷಿ ಪದ್ಧತಿ ಅಗತ್ಯ. ವಾರ್ಷಿಕ ಅವಧಿಗೂ ಮುನ್ನವೇ ಸಾಲ ಮರುಪಾವತಿಸಬೇಕು. ದೇಶ ರೈತರ ಮೇಲೆ ಅವಲಂಬನೆ ಹೊಂದಿದೆ ಎಂಬುದನ್ನು ಅರಿತುಕೊಳ್ಳಬೇಕು. ಸಹಕಾರಿ ಸಂಘದಿಂದ ಪಡೆದ ಸಾಲವನ್ನು ದುರುಪಯೋಗ ಮಾಡದೇ ಸದುಪಯೋಗಪಡಿಸಿಕೊಳ್ಳಿ. ದೇಸಿ ಜಾನುವಾರು ತಳಿಗಳಿಗೆ ಹೆಚ್ಚಿನ ಮಹತ್ವ ನೀಡಿ. ದೇಸಿ ಪದ್ಧತಿಯ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದರು.
ಧಾರವಾಡ ಕೆಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಯು.ಎನ್. ಪೂಜಾರ ಮಾತನಾಡಿ, ತಾಲೂಕಿನ 19 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಸುಮಾರು 515 ರೈತರು ರು. 1.35 ಲಕ್ಷಗಳ ಮುದ್ದತ್ತು ಮೀರಿದ ಸಾಲ ತೀರುವಳಿ ಆದಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಬಡ್ಡಿ ರಹಿತ ಸಾಲ ಮಂಜೂರ ಆಗುತ್ತದೆ. ರೈತರ ಸಾಲವನ್ನು ಮಾಜಿ ಶಾಸಕ ರಾಜಶೇಖರ ಸಿಂಧೂರ ಮರು ಪಾವತಿಸಿರುವುದನ್ನು ಶ್ಲಾಘಿಸಿದರು.