ಡಾ. ಮೀನಾ ಚಂದಾವರ್ಕರ್‌ಗೆ ಪತ್ರಿ ಪ್ರತಿಷ್ಠಾನ ಪ್ರಶಸ್ತಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 18
ಪತ್ರಿ ಪ್ರತಿಷ್ಠಾನದ ಮೊದಲ ಪ್ರಶಸ್ತಿ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಮೀನಾ ಚಂದಾವರ್ಕರ್ ಅವರಿಗೆ ಲಭಿಸಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ವಿರೂಪಾಕ್ಷಪ್ಪ ಪತ್ರಿ ನುಡಿದರು.
ಈ ಕುರಿತಂತೆ ಇಲ್ಲಿನ ನೌಕರರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನಾಟಕ ಹೀಗೆ ವಿವಿಧ ರಂಗಗಳಲ್ಲಿ ಮಹತ್ತರ ಸಾಧನೆ ತೋರಿದ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ ಪತ್ರಿ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು, ಇದರ ಮೊದಲ ಪ್ರಶಸ್ತಿಯನ್ನು ಮಹಿಳಾ ಸಾಧಕಿಗೆ ನೀಡುತ್ತಿರುವುದು ಸಂತಸ ನೀಡಿದೆ.
ಪ್ರತಿಷ್ಠಾನದಲ್ಲಿ ಪ್ರಗತಿಪರ ಚಿಂತನೆ, ವಿಚಾರಗಳನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಸಂಪೂರ್ಣವಾಗಿ ಕುಟುಂಬವನ್ನೇ ತೊಡಗಿಸಿಕೊಂಡಿದ್ದೇವೆ. ಪ್ರಶಸ್ತಿ ರು. 5 ಸಾವಿರ ನಗದು ಮತ್ತು ಸನ್ಮಾನ ಹಾಗೂ ಗೌರವಗಳನ್ನು ಹೊಂದಿದೆ ಎಂದರು.
ಪ್ರತಿಷ್ಠಾನದ ಬೆನ್ನೆಲುಬಾಗಿ ನಿಂತಿರುವ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕೌಟುಂಬಿಕವಾಗಿಯೇ ಕನ್ನಡದ ಕಾರ್ಯಕ್ಕೆ ಪತ್ರಿ ಕುಟುಂಬ ಬಹುದಿನಗಳಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಪ್ರಸ್ತುತ ದಿನಗಳಲ್ಲಿ ಹರಿದು ಹಂಚಿ ಹೋಗುತ್ತಿರುವ ಕುಟುಂಬ ವ್ಯವಸ್ಥೆಗೆ ವ್ಯತಿರಿಕ್ತವಾಗಿ ಪತ್ರಿ ಕುಟುಂಬಸ್ಥರು ಪ್ರತಿ ಹಬ್ಬ-ಹರಿದಿನಗಳನ್ನು ಸಹೋದರರೋರ್ವರ ಮನೆಯಲ್ಲಿ ಎಲ್ಲರೂ ಕಲೆತು ಹಬ್ಬದಾಚರಣೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ. ಇದು ಮತ್ತೆ ಅವಿಭಕ್ತ ಕುಟುಂಬಗಳು ಒಗ್ಗೂಡುವ ಸಂಧ್ಯಾಕಾಲಕ್ಕೆ ಮುನ್ನುಡಿ ಬರುಯುವಂತಾಗಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಮಲ್ಲಿಕಾರ್ಜುನ ಪತ್ರಿ ಉಪಸ್ಥಿತರಿದ್ದರು.