ಮೌಲ್ಯ ಶೋಧನೆಗೆನವ್ಯಕಾವ್ಯ: ಜಗದೀಶ
ಹಾವೇರಿ: ಒಂದು ಕಾವ್ಯದ ಸತ್ವ ಮುಗಿದಾಗ, ಹೊಸ ಕಾವ್ಯ ಹುಟ್ಟುತ್ತದೆ. ಜೀವನ ಮೌಲ್ಯಗಳನ್ನು ಬರಿ ಆರಾಧನೆಯಾಗಿ ಸ್ವೀಕರಿಸಿ ಬಂದ ನವೋದಯ ಕಾವ್ಯಕ್ಕೆ ಪ್ರತಿಯಾಗಿ ಜೀವನ ಮೌಲ್ಯಗಳ ಶೋಧನೆ ಮಾಡುವ ರೀತಿಯಲ್ಲಿ ನವ್ಯಕಾವ್ಯ ಮೂಡಿಬಂದಿದೆ ಎಂದು ಖ್ಯಾತ ಕವಿ ಜಗದೀಶ ಮಂಗಳೂರಮಠ ನುಡಿದರು.
ಇಲ್ಲಿನ ಜಿಲ್ಲಾ ವಾರ್ತಾ ಭವನದಲ್ಲಿ ನಡೆಯುತ್ತಿರುವ ಯುವಕಾವ್ಯ ಕಮ್ಮಟದ ನವ್ಯಕಾವ್ಯ ಪರಂಪರೆ ಕುರಿತಂತೆ ಮಾತನಾಡಿದ ಅವರು, 1950ರಲ್ಲಿ ಗೋಪಾಲಕೃಷ್ಣ ಅಡಿಗರ ಭೂಮಿಗೀತ ಚಂಡಮದ್ದಳೆ ನವ್ಯಕಾವ್ಯದ ದೊಡ್ಡ ಮಾದರಿಗಳಾದವು. 1950ರ ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿ ನವ್ಯಕಾವ್ಯದ ಸುಳಿವು ನೀಡಿದರು. ಗೋಕಾಕರೇ ನವ್ಯಕಾವ್ಯ ಬರೆದ ಮೊದಲ ಕವಿ. ನವೋದಯ ಕಾವ್ಯದ ಹಿರಿಯ ಕವಿಗಳಾದ ಜಿ.ಎಸ್. ಶಿವರುದ್ರಪ್ಪ, ಕೆ.ಎಸ್. ನರಸಿಂಹಸ್ವಾಮಿಯವರು ನವ್ಯಕಾವ್ಯದ ಹಾದಿಯಲ್ಲಿ ತಿರುಗಿದ್ದು ನವ್ಯದ ಸಾಧನೆ ಎಂದರು. ಹಿರಿಯ ಕವಿ ಡಾ. ಧರಣೇಂದ್ರ ಕುರಕುರಿ, ಕವಿಕಾವ್ಯ ಸಂವಾದದಲ್ಲಿ ತಮ್ಮ ಕಾವ್ಯಾನುಭವ ಹಂಚಿಕೊಂಡರು.
ಹಿರಿಯ ಕವಿ ಗಂಗಾಧರ ನಂದಿ, ತಾರಾ ಹೆಗಡೆ, ಶಿಬಿರದ ನಿರ್ದೇಶಕ ಡಾ. ಪಿ.ಟಿ. ಲಕ್ಕಣ್ಣವರ, ನಾಗರಾಜ ನಡುವಿನಮಠ ಹಾಗೂ ಡಾ. ಭೋಜರಾಜ ಪಾಟೀಲ ಉಪಸ್ಥಿತರಿದ್ದರು.