ಶಿಕ್ಷಕರ ಸಲಹೆಯಿಂದ ಶಾಲಾಭಿವೃದ್ಧಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ. 18
ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ಶಿಕ್ಷಕರಲ್ಲಿದೆ. ಇದನ್ನರಿತು ಗ್ರಾಮದ ಪಾಲಕರು ಗ್ರಾಮಾಭಿವೃದ್ಧಿಗೆ ಸಲಹೆ ಪಡೆದುಕೊಂಡಾಗ ಮಾತ್ರ ಗ್ರಾಮ ಹಾಗೂ ಶಾಲೆಗಳು ಪೂರ್ಣಪ್ರಮಾಣದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಾಲೂಕಿನ ಅಕ್ಷರ ದಾಸೋಹ ಅಧಿಕಾರಿ ಎಸ್. ರಂಗಸ್ವಾಮಿ ಹೇಳಿದರು.
ತಾಲೂಕಿನ ಅರಳೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾರದಾ ಪೂಜೆ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪಠ್ಯೇತರ ಚಟುವಟಿಕೆಯಿಂದ ಸರ್ವಾಂಗೀಣ ಅಭಿವೃದ್ಧಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳಿಗೆ ಚಿಕ್ಕಂದಿನಿಂದಲೇ ಸೇವಾ ಮನೋಭಾವವನ್ನು ಶಿಕ್ಷಕರು ಬೆಳೆಸಬೇಕು. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆ ಮಕ್ಕಳಿಗೆ ಬಹಳ ಮುಖ್ಯವಾಗಿದ್ದು, ಶಿಕ್ಷಕರು ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಗಮನಹರಿಸಬೇಕು. ಇದರಿಂದ ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದರು.
ಇದೇ ಸಂದರ್ಭ ತಾವು ಕಲಿತ ಶಾಲೆಗೆ 7ನೇ ತರಗತಿಯ ಮಕ್ಕಳು ಪುಸ್ತಕಗಳನ್ನು ಇಡಲು ರ್ಯಾಕ್ನ್ನು ಕೊಡುಗೆಯಾಗಿ ನೀಡಿದರು. ಅನುಷಾ ಶೆಟ್ಟರ್, ಸೌಮ್ಯಾ ಕರೆಣ್ಣನವರ್, ಲಕ್ಷ್ಮೀ ಹಿರೂರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಗಮನ ಸೆಳೆದ ಚಿತ್ರಕಲೆ: ಪ್ರಸಕ್ತ ಸಾಲಿನಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಕ್ರೀಡೆಯಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಲೇಖಕ, ಶಿಕ್ಷಕ ಟಿ. ಶಿವಕುಮಾರ್ ಪ್ರದರ್ಶಿಸಿದ 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಚಿತ್ರಪಟಗಳು ಎಲ್ಲರ ಗಮನ ಸೆಳೆದವು.
ಮುಖ್ಯೋಪಾಧ್ಯಾಯ ಬಿ.ಎಂ. ಉದ್ದೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕರಾದ ಎ.ಆರ್. ಪ್ರಾಣೇಶ್ವರರಾವ್, ವೈ.ಬಿ. ದೊಡ್ಡಮನಿ, ಸಂಪನ್ಮೂಲ ವ್ಯಕ್ತಿ ಪಿ.ಎಂ. ಚಲವಾದಿ, ಎಸ್.ಕೆ. ದೊಡ್ಡಮನಿ, ಟಿ. ಶಿವಕುಮಾರ್, ಗಿರೀಶ್ ನೆಲ್ಲಿಕೊಪ್ಪ, ಎಂ.ಎಸ್. ಬಡಿಗೇರ್, ಪ್ರಭಾ ಪಾಂಡುರಂಗ, ದೀಪಾ ಜಾಂಬೇಕರ್, ಅನಿಲ್ ಗೋಣೆಣ್ಣನವರ್, ಅಕ್ಷಯ ಗುನಗಾ, ಶ್ರೀನಿವಾಸ್ ದೀಕ್ಷಿತ್ ಇತರರು ಇದ್ದರು.