ಬಗರ್ಹುಕುಂ ಜಮೀನು ಸಕ್ರಮಗೊಳಿಸಿ
ಹಿರೇಕೆರೂರು: 50 ವರ್ಷಗಳಿಂದ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಹಿರೇಕೆರೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ತಾಲೂಕಿನ ಬೆಳ್ಳೂರು, ಬನ್ನಿಹಟ್ಟಿ, ಚನ್ನಳ್ಳಿ, ನಿಡನೇಗಿಲು ಮತ್ತು ವರಹ ಗ್ರಾಮಗಳ ಬಗರ್ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. ಅವರು ಸಾಗುವಳಿ ಮಾಡುತ್ತಿರುವ ಭೂಮಿಗಳನ್ನು ಭೂ ಸಕ್ರಮಗೊಳಿಸುವಂತೆ ಒತ್ತಾಯಿಸಿ ಸಾಗುವಳಿದಾರರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ನಿರ್ಲಕ್ಷ್ಯ: ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ಬಗರ್ಹುಕುಂ ಭೂಮಿಯನ್ನು ಕೋರಿ ಸರ್ಕಾರಕ್ಕೆ ಫಾರ್ಮ ನಂ. 50ರಲ್ಲಿ ಅರ್ಜಿ ಸಲ್ಲಿಸಿದ್ದು, ಅವು ತಾಲೂಕು ಬಗರ್ಹುಕುಂ ಸಾಗುವಳಿ ಸಕ್ರಮ ಸಮಿತಿಯಲ್ಲಿ ವಿಚಾರಣೆಗೆ ಬಾಕಿ ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಅವುಗಳ ವಿಚಾರಣೆ ನಡೆಸದೇ ಸರ್ಕಾರ ನೇಮಿಸಿದ ಶಾಸಕರ ಅಧ್ಯಕ್ಷತೆಯ ಸಮಿತಿ ನಿರ್ಲಕ್ಷಿಸಿದೆ ಎಂದು ದೂರಿದರು.
ಅರಣ್ಯ ಸಿಬ್ಬಂದಿಯಿಂದ ತೊಂದರೆಯಾಬಾರದು: ಕಳೆದ ವರ್ಷ ಮೇ. 25ರಂದು ಸಭೆ ಸೇರಿದ ಬಗರ್ಹುಕುಂ ಸಾಗುವಳಿ ಸಕ್ರಮ ಸಮಿತಿಯು ಅಂದು ತಡಕನಹಳ್ಳಿ ಗ್ರಾಮದ ಅರ್ಜಿಗಳನ್ನು ಮಾತ್ರ ವಿಚಾರಣೆ ಮಾಡಿ, ಉಳಿದ ಸಾವಿರಾರು ಅರ್ಜಿಗಳನ್ನು ಹಾಗೆಯೇ ಉಳಿಸಿದೆ. ರಾಜ್ಯ ಉಚ್ಚ ನ್ಯಾಯಾಲಯವು ತಡಕನಹಳ್ಳಿ ಗ್ರಾಮದ ಅರ್ಜಿಗಳ ವಿಲೇವಾರಿ ಆಗುವವರೆಗೂ ಬಗರ್ಹುಕುಂ ಸಾಗುವಳಿದಾರರ ಕಬ್ಜಾ ವಹಿವಾಟಿಗೆ ತೊಂದರೆ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದೇ ಆದೇಶದ ಮೇಲೆ ಈಗ ಪ್ರಸ್ತುತ ತಾಲೂಕಿನ ಬೆಳ್ಳೂರು, ಬನ್ನಿಹಟ್ಟಿ, ಚನ್ನಳ್ಳಿ, ನಿಡನೇಗಿಲು ಮತ್ತು ವರಹ ಗ್ರಾಮಗಳ ಅರ್ಜಿ ವಿಚಾರಣೆ ಆಗುವವರೆಗೆ ಅರಣ್ಯ ಇಲಾಖೆಯವರು ರೈತರ ವಹಿವಾಟಿಗೆ ತೊಂದರೆ ಕೊಡಬಾರದು ಎಂದು ಒತ್ತಾಯಿಸಿದರು.
ಕೆಜೆಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ರಾಯ್ಕರ, ತಾಪಂ ಸದಸ್ಯ ಶಿವಣ್ಣ ಗಡಿಯಣ್ಣನವರ, ಶಿವ್ಯಾ ನಾಯ್ಕ, ಪೀರ್ಯಾ ನಾಯ್ಕ, ರಾಜು ಹರಿಜನ, ಮೇಘರಾಜ ಲಮಾಣಿ, ರಾಜು ಹರಿಜನ, ಯೋಗ್ಯಾ ನಾಯ್ಕ ಲಮಾಣಿ, ರಾಮ್ಯಾನಾಯ್ಕ ಲಮಾಣಿ, ಬಸವರಾಜ ಲಮಾಣಿ, ಷಣ್ಮಖ ಲಮಾಣಿ, ಜಯಪ್ಪ ಹರಿಜನ, ಎಲ್ಲಮ್ಮ ಮುದ್ದೇರ, ಬಸಪ್ಪ ಹರಿಜನ, ತಿಮ್ಮವ್ವ ಭೋವಿ, ರೆಹಮಾನ್ಸಾಬ್ ದೊಡ್ಡಮನಿ, ತಿಮ್ಮಪ್ಪ ವಡ್ಡರ, ಹನುಮಂತಪ್ಪ ಹರಿಜನ, ಹನುಮಂತನಾಯ್ಕ ಲಮಾಣಿ, ಶೋಭಾಬಾಯಿ ಲಮಾಣಿ, ಲಕ್ಷ್ಮೀಬಾಯಿ ಲಮಾಣಿ, ನಾಗಪ್ಪ ಹರಿಜನ, ನಾಗಪ್ಪ ಮಾವಿನತೋಪ, ಶಿವಪ್ಪ ನೂಲಗೇರಿ, ಪುಟ್ಟಪ್ಪ ಮಡಿವಾಳರ ಇತರರಿದ್ದರು. ಪ್ರತಿಭಟನಾಕಾರರು ಸರ್ವಜ್ಞ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ತುಷಾರ್ ಹೊಸೂರಗೆ ಮನವಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದರಿಂದ ಪ್ರತಿಭಟನೆಯಿಂದ ಹಿಂದೆ ಸರಿಯಲಾಯಿತು.
ಬಗರ್ಹುಕುಂ ಭೂಮಿ ಕೋರಿ ಸರ್ಕಾರಕ್ಕೆ ಫಾರ್ಮ ನಂ. 50ರಲ್ಲಿ ಅರ್ಜಿ ಸಲ್ಲಿಸಿದ್ದು, ಅವು ತಾಲೂಕು ಬಗರ್ಹುಕುಂ ಸಾಗುವಳಿ ಸಕ್ರಮ ಸಮಿತಿಯಲ್ಲಿ ವಿಚಾರಣೆಗೆ ಬಾಕಿ ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಅವುಗಳ ವಿಚಾರಣೆ ನಡೆಸದೇ ಸರ್ಕಾರ ನೇಮಿಸಿದ ಶಾಸಕರ ಅಧ್ಯಕ್ಷತೆಯ ಸಮಿತಿ ನಿರ್ಲಕ್ಷ್ಯ ವಹಿಸಿದೆ.
ಯು.ಬಿ. ಬಣಕಾರ, ಮಾಜಿ ಶಾಸಕ