ಬ್ಯಾಡಗಿಯಿಂದ ಸುರೇಶಗೌಡ ಸ್ಪರ್ಧೆ
ಬ್ಯಾಡಗಿ: ಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಡಗಿ ವಿಧಾನಸಭೆ ಕ್ಷೇತ್ರಕ್ಕೆ ಕೆಜೆಪಿಯಿಂದ ಮಾಜಿ ಶಾಸಕ ಸುರೇಶಗೌಡ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಪುರಸಭೆ ಚುನಾಯಿತರಾದ ನೂತನ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಥಳೀಯ ಪುರಸಭೆಗೆ 12 ಜನ ಕೆಜೆಪಿ ಸದಸ್ಯರು ಆಯ್ಕೆಯಾಗಿರುವುದು ಹರ್ಷವೆನಿಸುತ್ತದೆ. ಇದರಿಂದ ಸದಸ್ಯರ ಗೆಲವು ಬಿಎಸ್ವೈ ಸಾಧನೆ ಹಾಗೂ ಅಭಿವೃದ್ಧಿಗೆ ದೊರೆತ ಜನಮನ್ನಣೆಯಾಗಿದೆ. ಅಭಿವೃದ್ಧಿಯಲ್ಲಿ ರಾಜ್ಯವನ್ನು 2ನೇ ಸ್ಥಾನಕ್ಕೆ ಕೊಂಡೊಯ್ದಿದ್ದ ಬಿಎಸ್ವೈ ಅವರನ್ನು ಕುತಂತ್ರದಿಂದ ಕೆಳಗಿಳಿಸಿದ್ದಲ್ಲದೇ, ರಾಜ್ಯವನ್ನು 11ನೇ ಸ್ಥಾನಕ್ಕೆ ತಳ್ಳಿದ್ದೆ ಬಿಜೆಪಿಯ ಒಂದೂವರೆ ವರ್ಷದ ಸಾಧನೆಯಾಗಿದೆ ಎಂದರು.
ಜವಾಬ್ದಾರಿ ಹೆಚ್ಚಿದೆ: ಪುರಸಭೆಗೆ ಆಯ್ಕೆಯಾಗಿ ವಿಜಯದ ಅಲೆಯಲ್ಲಿ ತೇಲುತ್ತಿರುವ ಸದಸ್ಯರಿಗೆ ತಮ್ಮ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ ಎಂದು ಕಿವಿಮಾತು ಹೇಳಿದ ಉದಾಸಿ, ಮುಂದಿನ ವಿಧಾನಸಭಾ ಚುನಾವಣೆ ಕೆಜೆಪಿಗೆ ಅಗ್ನಿಪರೀಕ್ಷೆ. ಹೀಗಾಗಿ ಬಿಎಸ್ವೈ ಸಾಧನೆಯನ್ನು ಒರೆಗಲ್ಲಿಗೆ ಹಚ್ಚಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಅವರ ಸಾಧನೆಗಳನ್ನು ಮತದಾರನ ಬಳಿಗೆ ಕೊಂಡೊಯ್ಯಬೇಕಾಗಿದೆ ಎಂದರು.
ಭಿನ್ನಾಭಿಪ್ರಾಯ ಮರೆಯರಿ: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿದ ವ್ಯಕ್ತಿಗಳಿಗೆ ಹೆಚ್ಚು ಒಲವು ಇರುತ್ತದೆ. ಹೀಗಾಗಿ ಕೆಲ ಕಾರ್ಯಕರ್ತರು ಪಕ್ಷದಿಂದ ದೂರವಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಚುನಾಯಿತ ಸದಸ್ಯರು ಇಂತಹ ಸಣ್ಣ-ಪುಟ್ಟ ಅಭಿಪ್ರಾಯಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಿಕೊಂಡು ಪಕ್ಷ ಸೂಚಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಪಡುವಂತೆ ಮನವಿ ಮಾಡಿದರು.
ನಂಬಬೇಡಿ: ವಿಪ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಕಪೋಲಕಲ್ಪಿತವಾಗಿವೆ. ಪುರಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳು ಅದ್ಭುತ ಗೆಲವು ಸಾಧಿಸಿದ್ದು, ಪಟ್ಟಣದ ಮತದಾರರು ಇಂತಹ ಕಾರ್ಯಕ್ರಮಗಳನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ಕೆಜೆಪಿ ಬೆಂಬಲಿಸಿದ್ದಾರೆ ಎಂದರು.
ಇದೇ ಸಂದರ್ಭ ಇತ್ತೀಚೆಗೆ ಜರುಗಿದ ಪುರಸಭೆ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ಸಚಿವ ಉದಾಸಿ ಸನ್ಮಾನಿಸಿದರು. ಮಾಜಿ ಶಾಸಕ ಸುರೇಶಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್, ಶಹರ ಘಟಕದ ಅಧ್ಯಕ್ಷ ಗಂಗಣ್ಣ ಎಲಿ ಜಿಪಂ ಸದಸ್ಯರಾದ ಶಿವಕುಮಾರ ಮುದ್ದಪ್ಪಳವರ, ರಾಜೇಂದ್ರ ಹಾವೇರಣ್ಣನವರ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸುರೇಶ ಯತ್ನಳ್ಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಣ್ಣ ಶೆಟ್ಟರ್, ಕನ್ನಪ್ಪ ಕೊಪ್ಪದ ಉಪಸ್ಥಿತರಿದ್ದರು.