ವಾಜಪೇಯಿ ಉಚಿತ ಆರೋಗ್ಯ ಶ್ರೀ ಶಿಬಿರ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 19
ಬೆಂಗಳೂರಿನ ಎಂ.ಎಸ್. ರಾಮಯ್ಯ ನಾರಾಯಣ ಹೃದಯಾಲಯದ ಆಶ್ರಯದಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ವಾಜಪೇಯಿ ಆರೋಗ್ಯ ಶ್ರೀ ಶಿಬಿರ ಮಾ. 21ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಜರುಗಲಿದೆ. ಶಿಬಿರದಲ್ಲಿ ನುರಿತ ತಜ್ಞವೈದ್ಯರು ತಪಾಸಣೆ ನಡೆಸುವರು ಹಾಗೂ ಇಸಿಜಿ ಮಾಡಲಾಗುವುದು. ಹೃದಯರೋಗಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗುವುದೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಎನ್. ಮರೆಕ್ಕನವರ ತಿಳಿಸಿದ್ದಾರೆ.
ರೋಗಿಗಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಆದ್ದರಿಂದ ಶಿಬಿರಕ್ಕೆ ಆಗಮಿಸುವಾಗ ಫೋಟೋ ಇರುವ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್, ತಾತ್ಕಾಲಿಕ ಪಡಿತರ ಚೀಟಿ ಹಾಗೂ ಡಾಕ್ಟರ್ ಚೀಟಿಯನ್ನು ತಪ್ಪದೇ ತರುವ ಮೂಲಕ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.