ಶಿಂದೆ ರಾಜಿನಾಮೆಗೆ ಒತ್ತಾಯ
ರಾಣಿಬೆನ್ನೂರು: ದೇಶದ ಗಡಿ ಅಂಚಿನಲ್ಲಿ ಹಾಗೂ ಒಳಗೆ ವಿವಿಧ ರೀತಿಯಿಂದ ದುಷ್ಕೃತ್ಯ ಎಸಗುವುದರೊಂದಿಗೆ ದೇಶದ ಘನತೆ, ಗೌರವಕ್ಕೆ ಧಕ್ಕೆ ತರುತ್ತಿರುವ ದೇಶದ್ರೋಹಿ ಉಗ್ರಗಾಮಿಗಳನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿರುವ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂದೆ ರಾಜಿನಾಮೆಗೆ ಆಗ್ರಹಿಸಿ ತಾಲೂಕಿನ ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಯುವಕ ಸ್ವಯಂಸೇವಾ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಹಳೆ ತಾಲೂಕು ಕಚೇರಿ ಬಳಿ ಸೇರಿದ ವಂದೇ ಮಾತರಂ ಯುವಕ ಸಂಘದ ಸದಸ್ಯರು, ತಾಲೂಕು ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವ ಸುಶೀಲಕುಮಾರ ಶಿಂದೆ ವಿರುದ್ಧ ಘೋಷಣೆಗಳನ್ನು ಕೂಗಿದರು. ತಹಸೀಲ್ದಾರ್ ಕಚೇರಿ ಎದುರು ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.
ಅಶಾಂತಿ ತಾಂಡವ: ಮೆರಣಿಗೆಯಲ್ಲಿ ಸಂಘದ ಮುಖಂಡ ಮಾಲತೇಶ ಕಜ್ಜರಿ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಶಾಂತಿ, ಸುವ್ಯವಸ್ಧೆಗೆ ಹೆಸರುವಾಸಿಯಾದ ಭಾರತ ದೇಶದಲ್ಲಿ ಶಾಂತಿಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಣೆ ಹೊತ್ತು ರಾಜಿನಾಮೆ ನೀಡಿ: ದೇಶದ ಸಂಪೂರ್ಣ ರಕ್ಷಣೆಯ ಜವಾಬ್ದಾರಿ ಹೊಂದಿರುವ ರಕ್ಷಣಾ ಇಲಾಖೆ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲಗೊಂಡಿದೆ. ಕಾರಣ ಉಗ್ರ ಸಂಘಟನೆಗಳು ದೇಶದ ವಿವಿಧ ನಗರಗಳಲ್ಲಿನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟದಂತಹ ಕೃತ್ಯ ಎಸಗುತ್ತಿದ್ದಾರೆ. ಕಳೆದ 4 ದಿನಗಳ ಹಿಂದೆ ಶ್ರೀನಗರದಲ್ಲಿ ಸಿಆರ್ಪಿಎಫ್ ಯೋಧರ ವಸತಿ ನಿಲಯದ ಮೇಲೆ ಉಗ್ರರು ದಾಳಿ ನಡೆಸಿ ದೇಶ ರಕ್ಷಣೆಗಾಗಿ ಕಾದು ಕುಳಿತಿದ್ದ ಐವರು ಯೋಧರನ್ನು ಬಲಿತೆಗೆದುಕೊಂಡಿರುವುದು ಆಘಾತಕಾರಿ. ಇದನ್ನು ಕೇಂದ್ರ ಗೃಹ ಕಚೇರಿ ನೋಡಿಯೂ ನೋಡವರಂತೆ ಕಣ್ಮುಚ್ಚಿ ಕುಳಿತಿರುವುದನ್ನು ಗಮನಿಸಿದರೆ, ದೇಶ ರಕ್ಷಣೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ಆಸಕ್ತಿ ಇಲ್ಲವೆಂದು ಕಾಣುತ್ತದೆ. ಆದ್ದರಿಂದ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂದೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನಾಕಾರರಿಂದ ಮನವಿ ಸ್ವಿಕರಿಸಿದ ತಹಸೀಲ್ದಾರ್ ಶಿವಕುಮಾರ ಮಾತನಾಡಿ, ಮನವಿ ಪತ್ರವನ್ನು ಆದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಜಗದೀಶ ಪಾಟೀಲ, ಜಗದೀಶ ಕೆರೂಡಿ, ಮಂಜುನಾಥ ಕುರಗುಂದ, ರವಿ ಕೆರೂಡಿ, ಕಾಂತೇಶ ವಡ್ಡರ, ಇನ್ನಿತರರಿದ್ದರು.