ಶಿಕ್ಷಕರ ಸಂಘದಿಂದ ರು. 90 ಲಕ್ಷ ಸಾಲ ವಿತರಣೆ
ಹಿರೇಕೆರೂರು: ತಾಲೂಕಿನಲ್ಲಿ ಶಿಕ್ಷಕರ ಸಹಕಾರಿ ಸಂಘ ಪ್ರತಿ ವರ್ಷವೂ ಲಾಭದಲ್ಲಿತ್ತು. ಇತ್ತೀಚೆಗೆ ಹಣ ದುರುಪಯೋಗ ಆದ ಹಿನ್ನೆಲೆಯಲ್ಲಿ ಲಾಭವನ್ನು ತಿಳಿಸಲು ಸಾಧ್ಯವಿಲ್ಲ ಎಂದು ಹಿರೇಕೆರೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ - ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಯು.ಎಚ್. ಬಿದರಿ ತಿಳಿಸಿದರು.
ಪಟ್ಟಣ ಗುರುಭವನದಲ್ಲಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ನಿವೃತ್ತಿ ಹಾಗೂ ಬಡ್ತಿ ಹೊಂದಿದ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ವಾರ್ಷಿಕ ವರದಿ ವಾಚಿಸಿದ ಅವರು, ಕಳೆದ ವರ್ಷ 986 ಸದಸ್ಯರಿದ್ದು, ಹೊಸದಾಗಿ 38 ಶಿಕ್ಷಕರು ಸದಸ್ಯರಾಗಿದ್ದಾರೆ. ಒಟ್ಟಾರೆ 1002 ಸದಸ್ಯರನ್ನು ಹೊಂದಿದೆ. ಈ ವರ್ಷ ರು. 90 ಲಕ್ಷ ಸಾಲ ವಿತರಿಸಲಾಗಿದೆ. ರು. 85,81,400 ವಸೂಲು ಮಾಡಲಾಗಿದೆ. ನಿರಂತರ ಠೇವಣಿ ರು. 1,29,629 ಇದೆ ಎಂದರು.
ಸಂಘದ ಅಧ್ಯಕ್ಷ ಎಸ್.ಎಂ. ಕ್ವಾರಡಿ ಮಾತನಾಡಿ, ಎಲ್ಲ ಸದಸ್ಯರಿಗೆ ರು. 50 ಸಾವಿರ ಸಾಲ ವಿತರಿಸಲು ಚಿಂತನೆ ನಡೆಸಲಾಗಿದೆ. ಸದಸ್ಯರು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಸಂಘ ಆರ್ಥಿಕವಾಗಿ ಮತ್ತಷ್ಟು ಸಬಲವಾಗಲಿದೆ. ಸ್ವಾವಲಂಬನೆ ಮತ್ತು ಪರಸ್ಪರ ಸಹಕಾರಕ್ಕೆ ಪ್ರೋತ್ಸಾಹ ನೀಡಿ. ಮಿತವ್ಯಯ ಜೀವನ ನಡೆಸುವ ಮೂಲಕ ಉಳಿತಾಯ ಮಾಡುವಂತೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಕೆ.ಎನ್. ವೆಂಕಣ್ಣನವರ, ಸದಸ್ಯರಾದ ಆರ್.ಎಫ್. ಹುಲ್ಲತ್ತಿ, ಪಿ.ವಿ. ಐರಣಿ, ಬಿ.ವಿ. ಸೊರಟೂರ, ಬಿ.ಎಂ. ಮತ್ತೂರ, ಎಫ್.ಎಚ್. ಕುಡುಪಲಿ, ಕೆ.ಟಿ. ಪಾಟೀಲ, ಬಿ.ಎಸ್. ದೇವಕ್ಕಳವರ, ಬಿ.ಬಿ. ಕಣಸೋಗಿ, ಎಸ್.ಎಚ್. ಕಟ್ಟಿಮನಿ, ಎ.ಪಿ. ಅಂಗಡಿ, ಎಂ.ಡಿ. ಕುರುಬರ, ಎ.ಎನ್. ಕೊರಕಲಿ, ಎಚ್.ಎಚ್. ಬತ್ತಿಕೊಪ್ಪ, ಎಂ.ಟಿ. ಲಮಾಣಿ ಇದ್ದರು.